For those who can't read Kannada, this blog is all about my first ever composed song 'Kalpane'. You can watch the song at the end of this page :)
ಕಲ್ಪನೆ - ನನ್ನ ಮೊದಲ ಹಾಡು
ಏನಾದ್ರೂ ಒಂದು ಒಳ್ಳೇ ಕೆಲಸ ಮಾಡಬೇಕು ಅಂತ ಮಾಡಕ್ಕೋಗಿ, ಅದು ಇನ್ನೇನೋ ಆಗಿ ಇನ್ನೊಂದು ಥರದಲ್ಲಿ ಒಳ್ಳೇದು ಆಗತ್ತೆ ಅನ್ನೋದಕ್ಕೆ ಈ ಪುಂಗಿ ಮ್ಯೂಸಿಕ್ ಉದಾಹರಣೆ !!
ಇದೆಲ್ಲಾ ಶುರು ಆಗಿದ್ದು 'ಲೈಫು ಇಷ್ಟೇನೆ' ಚಿತ್ರದ 'ಯಾರಿಗ್ ಹೇಳಣ' ಹಾಡು ಕೇಳಿದ ಮೇಲೆ.
ಆ ಹಾಡು ಸ್ವಲ್ಪ ನಮ್ಮ ಕಥೆ ಥರಾನೆ ಇದ್ಯಲ್ಲ, ಅದೇ ರಾಗಕ್ಕೆ ನಾನೂ ಯಾಕೆ ಹಾಡು ಬರೆಯೋಕೆ ಪ್ರಯತ್ನಿಸಬಾರದು ಅಂತ ಹಾಡು ಬರೆದು ನನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ನನ್ನ ಸ್ನೇಹಿತರಿಗೆಲ್ಲ ಕೇಳಿಸುತ್ತಿದ್ದೆ. ಅದೇ ಥರ ನಮ್ ಮಂಗ ಮುರಳಿಗೂ ಹಾಡು ಕೇಳಿಸಿದಾಗ, ಅವನು "ಲೇಯ್! ಈ ಹಾಡನ್ನ ಯಾಕೆ ಯೂಟ್ಯೂಬ್ ನಲ್ಲಿ ಹಾಕಬಾರದು? ನಮ್ಮ ಮನೆಗೆ ಬಾ, ಸುಮ್ನೆ ಒಂದು ಫೋಟೊ ಹಾಕಿ ಈ ಹಾಡನ್ನ ಹಾಕಣ" ಅಂದ.
ಹಾಗೇ ಹಾಕ್ತಾ ಕೊನೇಲಿ ಸುಮ್ನೆ 'ಕನ್ನಡ ಕಲಿತು ರೆಡಿ ಆಗಿರಿ, ಸದ್ಯದಲ್ಲೇ ಇನ್ನೊಂದು ಹಾಡು ಬರಲಿದೆ' ಅಂತ ಹಾಕಿದ್ವಿ, ಆಗ ಯಾವ ಹಾಡೂ ಬರೆದಿರದಿದ್ರೂ !
ಅದಾಗಿ ಒಂದು ತಿಂಗಳಿಗೆ 'ಸಿದ್ಲಿಂಗು' ಚಿತ್ರದ 'ಎಲ್ಲೆಲ್ಲೊ ಓಡುವ ಮನಸೆ' ಹಾಡಿಗೆ ಬೇರೆ ಸಾಹಿತ್ಯ ಬರೆದೆ.
ಹಿಂದಿನ ಹಾಡಿಗೆ ಕೆಲವೊಂದಷ್ಟು ಪದಗಳನ್ನು ಒರಿಜಿನಲ್ ಹಾಡಿನಲ್ಲಿದ್ದುದನ್ನೆ ಬಳಸಿದ್ದರಿಂದ ಈ ಸಲ ಅಷ್ಟೂ ಸಾಹಿತ್ಯ ಬದಲಾಯಿಸಲಾಯಿತು. ಅಷ್ಟಲ್ಲದೆ ಈ ಸಲ ಬರೀ ಒಂದು ಫೋಟೊ ಹಾಕೋದು ಬೇಡ ಅಂತ, ಒಂದಷ್ಟು ಫೋಟೊಗಳ ಜೊತೆ ಹಾಡಿನ ಸಾಹಿತ್ಯವನ್ನೂ ಸೇರಿಸಿದ್ದು ವೀಡಿಯೋ ಮಟ್ಟಿಗೆ ಎಲ್ಲರೂ ನೋಡಬಹುದು ಎನ್ನುವಷ್ಟಿತ್ತು.
ಯಾವುದಕ್ಕೂ ಈ ಹಾಡುಗಳೆಲ್ಲಾ ಒಂದೇ ಸೂರಿನಡಿಯಲ್ಲಿರಲಿ ಅಂತ ನಾವು ಮಾಡೋ ಈ ಅರ್ಥವಿಲ್ಲದ ಕೆಲಸಗಳಿಗೆ 'ಪುಂಗಿ ಮ್ಯೂಸಿಕ್' ಅಂತ ಹೆಸರಿಟ್ಟಿದ್ದೇವೆ.
ಹೀಗೆ ಬರೀ ಬೇರೆ ಹಳೇ ರಾಗಕ್ಕೆ ಹೊಸ ಸಾಹಿತ್ಯ ಬರೆಯೋದು, ಒಂದಷ್ಟು ಫೋಟೋಗಳನ್ನು ಹಾಕೋದು ಇಷ್ಟಲ್ಲದೆ ಹೊಸತೇನಾದರೂ ಮಾಡೋಣ ಅಂತ ಈ ಸಲ ಹಾಡು ಬರೆದು, ಅದಕ್ಕೆ ರಾಗ ಹಾಕಿ, ಸಂಗೀತವನ್ನೂ ಕೊಡಲು ಪ್ರಯತ್ನಿಸಿದ್ದೇನೆ.
ನೋಡಿ, ಇಷ್ಟ ಆದ್ರೆ ಲೈಕ್ ಮಾಡಿ ಚೆನಾಗಿಲ್ಲ ಅಂದ್ರೆ ಯಾವುದೇ ಮುಲಾಜಿಲ್ಲದೆ ಬೈದುಬಿಡಿ :)
ಸಾಹಿತ್ಯ
ಕವನ
ಆ ನಿನ್ನ ತಿಳಿನೀಲಿ, ಕಿವಿಯ ಓಲೆಯಲ್ಲಿ
ಜೋಕಾಲಿ ಆಡುವಾ ಮನಸಾಗಿದೆ.
ನನಗೊಂದು ಖಯಾಲಿ, ನಿನ ಕೆನ್ನೆ ಗುಳಿಯಲ್ಲಿ
ನೀರ್ತುಂಬಿ ಈಜೋಣವೆಂದೆನಿಸಿದೆ.
ಚಳಿಗಾಳಿ ಬೀಸ್ತಿದ್ರೂ, ಫ್ಯಾನ್ ಸ್ಪೀಡು ಐದಿದ್ರೂ
ಹೊದಿಕೆಯಾ ಸರಿಸುತಿದೆ ನಿನ್ನ ಬಿಸಿ ನೆನಪು.
ನೀ ನನಗೆ ಬೈದರೂ, ಮಳೆ ಸಿಡಿಲೇ ಬಂದರೂ
ಛತ್ರಿಯಾ ಹಿಡಿಯೋಕೆ ನನಗಿಲ್ಲ ಹುರುಪು.
ಇಷ್ಟೆಲ್ಲ ಹೊಗಳೋಕೆ,
ನೀನೇನು ಅಪ್ಸರೆಯೋ?
ಭೋರ್ಗರೆವ ಸಾಗರವೋ?
ನನ ಮುಖದ ಮೊಡವೆಯೋ?
ಅತಿ ಮಧುರ ರಾಗವೋ?
ಅಥವಾ ನೀನೆಂಬ ನೀನು ಬರೀ ನನ್ನ ಕಲ್ಪನೆಯೋ?!
ಹಾಡು
ಬರೆಯುವೆ ಎಂದು ಬರೆಯಲು ಕುಳಿತೆ, ಪದಗಳಾ ಸುಳಿವಿಲ್ಲಾ
ನಿನ್ನದೇ ಮೊಗವೆಲ್ಲ.
ನಿನ್ನಯಾ ನೋಟದಿ ನನ್ನನೇ ಮರೆತೆ, ಹಾಡನೂ ಮರೆತಿಲ್ಲ
ನಿನ್ನದೇ ಸ್ವರವೆಲ್ಲ
ಬೆಳಕೇ ಇಲ್ಲದೇ ನೋಡಲು ಸಾಧ್ಯವೇ?
ನೀಡಿದೇ ನೋಟ ನಿನ್ನಯ ಅಂದವೇ
ಹರಿಯುವ ನೀರು ಜುಳುಜುಳು ಎನದೆ ಹೇಳಿತು ನಿನ್ನಯ ಹೆಸರನ್ನೆ
ತಣ್ಣನೆ ರಾತ್ರಿ ನಿದ್ದೆಯು ಬರದೆ ಕಾಡಿತು ನಿನ್ನದೆ ಕಣ್ಸನ್ನೆ
ತಿಳಿಯದ ನೆಪದಲಿ ಚಂದ್ರನ ಮರೆಯಲಿ ನಿನ್ನಯ ಪಾಡಿಗೆ ನಗುತಿರಲು
ಬೆಳಕಿನ ವೇಗದಿ ಓಡಿದೆ ಮನವು ನಿನ್ನದೆ ನಗುವನು ಬರೆದಿಡಲು
ಲೇಖನಿ ಇರದೇ ಗೀಚಲು ಸಾಧ್ಯವೇ?
ಬರೆಸಿದೆ ಕವಿತೆ ನಿನ್ನಯ ನಗುವೇ || ಪ ||
ಹೇಳಲೆ ಎಂದು ಕೇಳಿದೆ ತುಟಿಯು ನನ್ನಯ ಮನದಾ ಬರವಣಿಗೆ
ತಡೆಯಲೆ ಬೇಡ ಎನ್ನುತ ಕನಸು ಹೊರಟಿದೆ ನಿನ್ನೆಡೆ ಮೆರವಣಿಗೆ
ನಿನ್ನಯ ಸ್ಪರ್ಶಕೆ ಸೋಲುವ ನಾನು ನೀನಿರೆ ಗೆಲ್ಲುವೆ ಜಗವನ್ನೆ
ಕನಸಿನ ಪಯಣಕೆ ಹೊರಟರೆ ನೀನು ಸುರಿಸುವೆ ಬಣ್ಣದ ಮಳೆಯನ್ನೆ
ಮೋಡವೇ ಇರದೇ ಮಳೆಯೂ ಸಾಧ್ಯವೇ?
ಸುರಿಸಿದೆ ಮಳೆಯ ನಿನ್ನಯ ಸ್ಪರ್ಶವೇ || ಪ ||