ಜೂನ್ ೧೬ರ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ
~ ~ ಕಳೆದ್ಹೋದೆ ಕಳೆದ್ಹೋದೆ! ~ ~
ಮರಳ ಮೇಲೆ ಬರೆದರಲೆಯು ತೊಳೆವುದಿಲ್ಲವೇನು?
ಎಂದೆನಿಸಿ ಅಲೆಯ ಮೇಲೇ ಬರೆಯಲ್ಹೊರಟೆ ನಾನು
ಬರೆದು-ಮುಳುಗಿ, ಬರೆದು-ಮುಳುಗಿ
ಕಳೆದ್ಹೋದೆ ಕಳೆದ್ಹೋದೆ!
ಬದುಕಬೇಕು, ಬರೆಯಬೇಕು ಎಂದೀಜಿದೆನಲ್ಲ
ಮೀನಿಗೋ ನಾನೆ ಹಸಿವು ನನ್ನ ತಿಂದಿತಲ್ಲ!
ಉಗುಳಿ-ನುಂಗಿ, ಉಗುಳಿ-ನುಂಗಿ
ಕಳೆದ್ಹೋದೆ ಕಳೆದ್ಹೋದೆ!
ಮೀನೀಗ ಹಾರುತಿದೆ ಕಡಲ್ಹಕ್ಕಿಯ ಕಾಲಡಿಗೆ!
ಸತ್ತ ಮೀನ ಬಾಯ್ತೆರೆದು ಬಂದೆನಾಗ ಹೊರಗೆ
ಕಡಲೋ-ನೆಲವೋ, ಕಡಲೋ-ನೆಲವೋ
ಕಳೆದ್ಹೋದೆ ಕಳೆದ್ಹೋದೆ!
ಆಕಾಶದಿ ತೇಲುತಿರಲು, ತಲೆಯು ಕೆಳಗೆ ಕಾಲು ಮೇಲೆ
ಪ್ರಾಣವೂ ಪಕ್ಷಿಯಂತೆ ಹಾರುತಿಹುದು ನನ್ನಲ್ಲೇ
ಸಾವೋ-ಬದುಕೋ, ಸಾವೋ-ಬದುಕೋ
ಕಳೆದ್ಹೋದೆ ಕಳೆದ್ಹೋದೆ!
ಹುಲ್ಲಿನಾ ಕುತ್ತರಿಯದು, ಅದರ ಮೇಲೆ ನನ್ನ ದೇಹ
ನೀರು ಬೇಕು ಬಾಯಾರಿದೆ, ಉದರ ಮತ್ತು ಜಿಹ್ವ
ಓಟ-ನಡಿಗೆ, ಓಟ-ನಡಿಗೆ
ಕಳೆದ್ಹೋದೆ ಕಳೆದ್ಹೋದೆ!
ತೆರೆದ ಬಾವಿ ಪಕ್ಕದಲ್ಲಿ ನೀರು ಕುಡಿದು ಕುಳಿತೆ
ಅಲ್ಲೇ ಇದ್ದ ಮಣ್ಣ ಮೇಲೆ ಬರೆದೆನು ಈ ಕವಿತೆ
ಸರಿಯೋ-ತಪ್ಪೋ, ಸರಿಯೋ-ತಪ್ಪೋ
ಕಳೆದ್ಹೋದೆ ಕಳೆದ್ಹೋದೆ!
ನಿಮ್ಮವ
- ಯೋಚಿತ
No comments:
Post a Comment