Sunday 30 December 2012

ದಯವಿಟ್ಟು ಕ್ಷಮಿಸಿ


ಕೆಲ ದಿನಗಳ ಹಿಂದೆ ಡೆಲ್ಲಿಯಲ್ಲಿ ನಡೆದ ಗ್ಯಾಂಗ್ ರೇಪ್ ವಿರುದ್ಧ ಡೆಲ್ಲಿ ಹಾಗೂ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ನಿನ್ನೆ ಬೆಳಿಗ್ಗೆ ಆ ಯುವತಿ ತೀರಿಕೊಂಡಮೇಲಂತೂ ಪ್ರತಿಭಟನೆಗಳು ಜೋರಾಗುತ್ತಿದೆ. ಈ ಸಂದರ್ಭದಲ್ಲಿ ಮಾನವೀಯತೆ ಇರುವ ಪ್ರತಿಯೊಬ್ಬರೂ ಕೇಳುತ್ತಿರುವ ಪ್ರಶ್ನೆ "ಆ ಕ್ರೂರ ಅತ್ಯಾಚಾರಿಗಳಿಗೆ ಶಿಕ್ಷೆ ಯಾವಾಗ?" ಅಂತ.

ಸದ್ಯದ ಮಟ್ಟಿಗೆ ಆ ಪ್ರಶ್ನೆ, ಅದಕ್ಕೆ ಆದಷ್ಟು ಬೇಗ ಸರ್ಕಾರದಿಂದ ಉತ್ತರ ಪಡೆಯಬೇಕೆಂಬ ಹಂಬಲ ಸರಿಯೇ ಆಗಿದ್ದರೂ, ಅಷ್ಟರಿಂದಲೇ ಮುಂದಾಗಬಹುದಾದ ಈ ರೀತಿಯ ಅಮಾನವೀಯ ಘಟನೆಗಳನ್ನು ನಿಲ್ಲಿಸಲು ಸಾಧ್ಯವಾಗುತ್ತದೆ ಅಂತ ಹೇಳಲಾಗುವುದಿಲ್ಲ. ಇಷ್ಟೆಲ್ಲ ಪ್ರತಿಭಟನೆಗಳ ಮಧ್ಯದಲ್ಲಿ ಇನ್ನೂ ವರದಿಯಾಗುತ್ತಿರುವ ಅತ್ಯಾಚಾರ ಪ್ರಕರಣಗಳೇ ಇದಕ್ಕೆ ಸಾಕ್ಷಿ.


ಈ ರೀತಿಯ ಘಟನೆಗಳಿಗೆ ಪ್ರತ್ಯಕ್ಷವಾಗಿ ಆ ಅತ್ಯಾಚಾರಿಗಳೇ ಕಾರಣರಾಗಿದ್ದರೂ, ಪರೋಕ್ಷವಾಗಿ ಸರ್ಕಾರ, ಸಂವಿಧಾನ, ಮಾಧ್ಯಮ, ಪೋಲಿಸರುಗಳ ಜೊತೆ ಇದನ್ನು ಬರೆಯುತ್ತಿರುವ ನಾನು, ಓದುತ್ತಿರುವ ನೀನು, ಈ ದೇಶದ ಪ್ರತಿ ಪ್ರಜೆಯೂ ಕಾರಣವಲ್ಲವೆ?

  1. ಇಂತಹ ಅತ್ಯಾಚಾರಿಗಳಿಗೆ ಅತ್ಯುಗ್ರ ಶಿಕ್ಷೆ ಕೊಟ್ಟು ಇನ್ಯಾರಾದರೂ ಈ ರೀತಿ ಮಾಡಿದರೆ ನಿಮಗೂ ಇದೇ ಗತಿ ಅಂತ ಸರ್ಕಾರ, ಸಂವಿಧಾನಗಳು ಹೇಳಿದ್ದರೆ ಇವತ್ತು ಈ ರೀತಿ ಆಗ್ತಿರಲಿಲ್ಲವೇನೋ?
  2. ಇಂತಹ ಪ್ರಕರಣಗಳಲ್ಲಿ ದುಡ್ಡಿನ ಮುಖ ನೋಡಿ ಹಲ್ಲು ಕಿಸಿಯದೆ, ತಪ್ಪು ಮಾಡಿದವರಿಗೆ ಪೋಲೀಸರು ಪ್ರಾಮಾಣಿಕವಾಗಿ ಶಿಕ್ಷೆ ಕೊಡಿಸಿದ್ದರೆ ಇವತ್ತು ಈ ರೀತಿ ಆಗ್ತಿರಲಿಲ್ಲವೇನೋ?
  3. ಟಿ.ಆರ್.ಪಿ., ಪ್ರಚಾರಕ್ಕಾಗಿ ಅಲ್ಲದೆ ನಿಜವಾದ ಸುದ್ದಿಯನ್ನು ಸರಿಯಾದ ರೀತಿಯಲ್ಲಿ ತಿಳಿಸುವುದನ್ನು ಮಾಧ್ಯಮಗಳು ಮಾಡಿದ್ದರೆ ಇವತ್ತು ಈ ರೀತಿ ಆಗ್ತಿರಲಿಲ್ಲವೇನೋ?
  4. ಎಲ್ಲಕ್ಕಿಂತ ಹೆಚ್ಚಾಗಿ ಹಿಂದೆ ನಡೆದ ದೌರ್ಜನ್ಯಗಳ ವಿರುದ್ಧವೂ ನಾವು ಇದೇ ರೀತಿ ಪ್ರತಿಭಟಿಸಿದ್ದರೆ ಇವತ್ತು ಈ ರೀತಿ ನಡೀತಿರಲಿಲ್ಲವೇನೋ?

ಇಲ್ಲಿಯವರೆಗೆ ಈ ರೀತಿ ಅತ್ಯಾಚಾರಕ್ಕೆ ಬಲಿಯಾದ, ಬದುಕಿಯೂ ಸತ್ತಂತಿರುವ ಅದೆಷ್ಟೋ ಜನರಿಗೆ ಕೈ ಮುಗಿದು ಕೇಳಿಕೊಳ್ಳೋಣ
"ದಯವಿಟ್ಟು ಕ್ಷಮಿಸಿ. ನಮ್ಮ ಕಡೆಯಿಂದ ತಪ್ಪಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ" ಅಂತ.

Photo Courtesy : media.indiatimes.in 

Wednesday 28 November 2012

Auditions of Movie Lucia 'Thinbeda Kammi' Song.


Me singing for the audition of the movie LUCIA for the song Thinbeda Kammi. Sorry if the Quality is not good. Played the Karaoke in Windows Media Player and Recorded this song using Sony Ericsson Mobile! Hope you like it :) 

You can see the original video of this song here https://www.youtube.com/watch?v=dxuw0b1r3bI

Other songs of PungiMusic Team https://www.youtube.com/watch?v=oof5-E1nOH8&feature=plcp

Friday 12 October 2012

ಹೊಸತೆಲ್ಲಾ ಹಳೆಯದೇ !

ಹೊಸತು
ಪೂರ್ಣಚಂದ್ರತೇಜಸ್ವಿಯವರ "ನಿಗೂಢ ಮನುಷ್ಯರು" ಓದಿದ ಮೇಲೆ ಅದ್ಯಾಕೋ ಯೋಗರಾಜ್ ಭಟ್ಟರ "ಮನಸಾರೆ" ಚಲನಚಿತ್ರ ನೆನಪಾಗ್ತಾ ಇದೆ.


ಇವರಿಬ್ಬರೂ ಹೇಳೋಹಾಗೆ ಯಾವುದೂ ಹೊಸತರಂತೆ ಕಾಣುತ್ತಿಲ್ಲ ! ಬೈಕ್ ಓಡಿಸೋಕೆ ಕಲಿಯೋದು ಹೊಸತಲ್ಲ, ಮನೆ ಕಟ್ಟೋದು ಹೊಸತಲ್ಲ (ಹೊಸ ರೀತಿ ಕಟ್ಟಿದರೂ ಕಟ್ಟುವ ಕ್ರಿಯೆಗೆ 'ಮನೆ ಕಟ್ಟೋದು' ಅಂತಾನೇ ತಾನೆ ಕರೆಯೋದು). ಇದೇ ರೀತಿ ಇನ್ನೂ ಪಟ್ಟಿ ಮಾಡಬಹುದು. ಕೊನೆಗೆ ಮೇಲೆ ಹೇಳಿದ ರೀತಿ "ಯಾವುದೂ ಹೊಸತಲ್ಲ" ಅನ್ನೋದೂ ಕೂಡ 'ಭಟ್ಟರು' ಹೇಳಿಯಾಗಿದೆ. ಹಾಗಾಗಿ ಈ "ಯಾವುದೂ ಹೊಸತಲ್ಲ" ಅಂತ ಹೇಳೋದೂ ಸಹ ಹೊಸತಲ್ಲ.

ನನ್ನಂತಹ ಪೆಕ್ರಗಳನ್ನು ನೋಡಿಯೇ 'ಗೋಪಾಲ ಕ್ರಿಷ್ಣ ಅಡಿಗ' ಅವರು "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ" ಅಂತ ವ್ಯಾಖ್ಯಾನಿಸಿದ್ದಾರೇನೋ? ಅಲ್ಲಿಗೆ ಈಗ ನಾವು ಮಾಡುತ್ತಿರುವುದೆಲ್ಲವನ್ನೂ ಬಿಟ್ಟು ಇನ್ನ್ನೊಂದೇನೋ "ಹೊಸತು" ಮಾಡಲು ಹೊರಟರೆ ಹಾಗೆ ಹೊಸತೇನೋ ಮಾಡುವುದೂ ಸಹ ಹಳೆಯದೇ ಆಯಿತಲ್ಲ!


ನಾವೇನೇ ಹೊಸದಾಗಿ ಹೇಳಿದರೂ/ಮಾಡಿದರೂ
"ಹೊಸತು" ಎನ್ನುವ 'ಪದ' ಹಳೆಯದೇ,
ಹೊಸತನ್ನು ಹುಡುಕುವ 'ಕ್ರಿಯೆ' ಹಳೆಯದೇ,
ಯಾರೂ ಹೇಳದಿದ್ದುದನ್ನು, ಕಂಡುಹಿಡಿಯದಿದ್ದುದನ್ನು, ಮಾಡದಿದ್ದುದನ್ನು ಮಾಡುತ್ತೀವಲ್ಲಾ? ಅದಷ್ಟೇ "ಹೊಸತು".


Photo Courtesy : - Google 

Friday 10 August 2012

"ಲೋ ಮಚ್ಚಾ ಮತ್ತು ಕೆಂಪು ಹಲ್ಲುಗಳು" : ಒಂದು ಕಥೆ

ಮೊನ್ನೆ ಬೆಳಿಗ್ಗೆ ಮುಂಚೆ 5:30 ರ ಸುಮಾರಿಗೆ ಮಲಗಿದವನಿಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಕಾರಣ ಒಂದು ಕೆಟ್ಟ  ಕನಸು! ಆ ಕನಸಿಗೆ, ಎಚ್ಚರವಿರುವಾಗ ಇನ್ನಷ್ಟು ಯೋಚನೆಯನ್ನು ಬೆರೆಸಿ ಈ "ಲೋ ಮಚ್ಚಾ ಮತ್ತು ಕೆಂಪು ಹಲ್ಲುಗಳು" ಎಂಬ ಕಥೆಯನ್ನು ಬರೆಯಲು ಪ್ರಯತ್ನಿಸಿದ್ದೇನೆ. ಪುರಸೊತ್ತಿದ್ದರೆ ಒಮ್ಮೆ ಓದಿಬಿಡಿ !


"ಲೋ ಮಚ್ಚಾ ಮತ್ತು ಕೆಂಪು ಹಲ್ಲುಗಳು"

ಟ್ನಿಕ್ ಟಿಕ್ ಟಿಕ್ ಟಿಕ್ ಟ್ನಿಕ್ ಟಿಕ್ ಟಿಕ್ ..... ಟ್ರೀ ಟುಕ್ ಟುಕ್ ಟ್ರೀ ಟುಕ್ ಟುಕ್ ಟ್ರೀ ಟುಕ್ ಟುಕ್
ಈ ರಾತ್ರಿ 12 ಗಂಟೇಲಿ ಅದ್ಯಾರು ಫೋನ್ ಮಾಡ್ತಿದಾರಪ್ಪ? ಅನ್ಕೊಂಡು ಫೋನ್ ನೋಡ್ತೀನಿ, ಮೊಬೈಲ್ 'ಕರಡಿ' ಅಂತ ತೋರಿಸ್ತಾ ಇದೆ. ಏನ್ ಆಯ್ತಪ್ಪ ಇವ್ನಿಗೆ ಅನ್ಕೊಂಡು ರಿಸೀವ್ ಮಾಡಿ "ಹಲೋ" ಅಂದೆ.
"ಲೋ ಮಚ್ಚಾ, ನಾಳೆ ಏನೋ ಪ್ಲಾನ್ ನಿಂದು?" ಆ ಕಡೆಯಿಂದ ಒಂದೇ ಉಸಿರಿಗೆ ಕೂಗ್ತಿದಾನೆ.
"ಅಂಥಾದ್ದೇನೂ ಇಲ್ಲ. ಒಂದು ಮೂಟೆ ಬಟ್ಟೆ ತೊಳೀಬೇಕು ಅಷ್ಟೆ" ಅಂದೆ.
"ಸರಿ ಹಂಗಾದ್ರೆ! ಟ್ರಿಪ್ ಹೋಗೋಣ. ನಾನು, ನೀನು, ಮಂಗ. ಸ್ಯಾಂಡ್ ಬರ್ತಾನಾ ಕೇಳು. ನಂದು ಒಂದು ಬೈಕು ಮಂಗಂದು ಒಂದು ಬೈಕು. ಬೆಳಿಗ್ಗೆ ಮುಂಚೆ ಹೊರಡೋಣ"
"ಯಾವ ಕಡೆಗೆ ಹೋಗ್ತಿದೀವಿ ಅಂತ ಕೇಳಬಹುದಾ ಸಾರ್" ಅಂದೆ.
"ಹೋಗ್ತೀವಲ್ಲಾ. ನಿಂಗೇ ಗೊತ್ತಾಗತ್ತೆ. ನೀನು, ಸ್ಯಾಂಡ್ ಇಬ್ರೂ ಬೆಳಿಗ್ಗೆ 7 ಗಂಟೆ ಹೊತ್ತಿಗೆ ರೆಡಿ ಇರಿ. ತಿಂಡಿ ತಿಂದು ಹೊರಡೋಣ" ಅಂದ.
ಸ್ಯಾಂಡ್ ನ ಎಬ್ಬಿಸಿ ಬೆಳಿಗ್ಗೆ ಬೇಗ ಹೊರಡಬೇಕು ಅಂತ ಹೇಳಿ. ಅವನ ಹತ್ರ ಎಬ್ಬಿಸಿದ್ದಕ್ಕೆ ಸ್ವಲ್ಪ ಬೈಸಿಕೊಂಡು ಮಲಗಿದೆ.

ಬೆಳಿಗ್ಗೆ ಬೇಗ ಎದ್ದು 7 ಗಂಟೆಗೇ ತಯಾರಾಗಿ ಕೂತಿದ್ರೆ ಆಸಾಮಿ ಪತ್ತೇನೇ ಇಲ್ಲ. ಅಂತೂ 7:30 ರ ಹೊತ್ತಿಗೆ ಕರಡಿ, ಮಂಗ ಇಬ್ರೂ ರೂಮಿಗೆ ಬಂದ್ರು. ಹೊರಟು 4th ಬ್ಲಾಕ್ ಹತ್ರ ಹೋಗಿ ತಿಂಡಿ ತಿಂದು ಬನ್ನೇರುಘ್ಹಟ್ಟದ ದಾರೀಲಿ ಬೈಕು ಮುಂದೆ ಹೊರಟಿತು.
"ಬನ್ನೇರುಘ್ಹಟ್ಟಕ್ಕೆ ಹೋಗ್ತಿದೀವಾ?" ಬೈಕ್ ಓಡಿಸುತ್ತಿದ್ದ ಕರಡೀನ ಕೇಳ್ದೆ.
"ಇಲ್ಲಾ ಮಚ್ಚಾ. ಬನ್ನೇರುಘ್ಹಟ್ಟದಿಂದ ಮುಂದೆ ಹತ್ತು ಕಿಲೋಮೀಟರ್ ಹೋದ್ರೆ 'ಕಾಗೆ ಕಾಲು ಗುಡ್ಡ' ಅಂತ ಒಂದು ಜಾಗ ಇದೆ ಅಲ್ಲಿಗೆ" ಅಂದ.
"ಏನು ಕಾಗೇನೋ, ಏನು ಗುಡ್ಡಾನೋ, ಏನಿದೆ ಅಲ್ಲಿ? ಬರೀ ಗುಡ್ಡಾನಾ?" ನಂಗೆ ಹೆಸರು ಕೇಳೇ ಒಂಥರಾ ಕಾತರಿಕೆ.
"ಅಲ್ಲ. ಕಾಡಿನ ಮಧ್ಯೆ ಗುಡ್ಡ, ಗುಡ್ಡದ ಮೇಲೆ ಕೋಟೆ ಇದ್ಯಂತೆ. ಮಂಗನ ಹತ್ರ ಕೇಳು. ಅವ್ನೇ ಹೇಳಿದ್ದು"
ಅಷ್ಟೊತ್ತಿಗೆ ದಾರಿ ಬದೀಲಿ ಅದ್ಯಾವ್ದೋ ಅಂಗಡಿ ಎದುರಿಗೆ ಬೈಕ್ ನಿಲ್ಲಿಸಿದ್ವಿ. ಒಂದಷ್ಟು ತಿಂಡಿ ತಗೊಂಡು, ಸ್ಯಾಂಡ್ ಒಬ್ನೇ ಬ್ಯಾಗ್ ತಂದಿದ್ರಿಂದ ಅವನ ಬ್ಯಾಗಿಗೆ ಎಲ್ಲ ತಿಂಡೀನೂ ತುಂಬಿ ಮತ್ತೆ ಹೊರಟ್ವಿ.
ಈ ಸಲ ಮಂಗನ ಬೈಕಿನಲ್ಲಿ ಕೂತಿದ್ದ ನಾನು ಅವನನ್ನ ಕೇಳಿದೆ "ಹೆಂಗೆ ಗೊತಾಯ್ತೋ ಈ ಜಾಗ ನಿಂಗೆ?"
"ಸುಮ್ನೆ ಫೇಸ್ಬುಕ್ ಅಲ್ಲಿ ಏನೋ ನೋಡ್ತಿದ್ದೆ ನನ್ ಫ್ರೆಂಡ್ ಒಬ್ಬ ಒಂದು ವೆಬ್ ಸೈಟ್ ಲಿಂಕ್ ಮೆಸ್ಸೇಜ್ ಮಾಡ್ದ. ನೋಡ್ದೆ. ಒಂಥರಾ ಬೇರೆ ಥರ ಇತ್ತು. ಹೋಗಣ ಅಂತ ಪ್ಲಾನ್ ಮಾಡಿದ್ವಿ" ಅಂದ.

ಒಂದಷ್ಟು ದೂರ ಹೋದ ಮೇಲೆ ಎಡಗಡೆಗೆ "ಕಾಗೆ ಕಾಲು ಗುಡ್ಡಕ್ಕೆ" ಅಂತ ಒಂದು ಬೋರ್ಡು ಕಾಣ್ತು. ಆ ಹಳೆಯ ಮರದ ಬೋರ್ಡು ತೋರಿಸಿದ್ದ ಮಣ್ಣಿನ ದಾರೀಲಿ ಒಂದು ಕಿಲೋಮೀಟರ್ ನಷ್ಟು ದೂರ ಹೋಗಿರಬಹುದು, ಮಣ್ಣಿನ ದಾರಿ ಅಲ್ಲಿಗೇ ಕೊನೆಯಾಗಿತ್ತು.
ತುಕ್ಕು ಹಿಡಿದಿರೋ ತಂತಿ ಬೇಲಿ ಮಧ್ಯ ಬಿಟ್ಟಿದ್ದ ಸ್ವಲ್ಪ ಜಾಗದಿಂದ ಒಂದು ಕಾಲುದಾರಿ ಮುಂದೆ ಹೋಗಿತ್ತು, ದೂರದಲ್ಲಿ ಕೋಟೆ ರೀತಿ ಕಪ್ಪು ಕಲ್ಲಿನ ಕಟ್ಟಡ ಕಂಡಿತು. ಬೈಕು ಅಲ್ಲೇ ನಿಲ್ಲಿಸಿ ಕಾಲುದಾರೀಲಿ ಹೊರಟ್ವಿ.
"ಲೇ ಮಂಗ. ಕೋಟೆ ಗುಡ್ಡದ ಮೇಲೆ ಅಂದೆ, ಇಲ್ಲೇ ಕಾಣ್ತಿದೆ?" ಮಂಗನ ಬೆನ್ನಿಗೆ ಹೊಡೆಯುತ್ತಾ ಸ್ಯಾಂಡ್ ಕೇಳಿದ.

ಅಷ್ಟೊತ್ತಿಗೆ ಆ ಕೋಟೆ ಹತ್ರ ಬಂದಿದ್ವಿ. ಟೀ ಅಂಗಡಿ ರೀತಿಯ ಒಂದು ಚಿಕ್ಕ ಅಂಗಡಿ ಹಾಕ್ಕೊಂಡು ಗಾಜಿನ ಲೋಟಗಳಲ್ಲಿ ಕೆಂಪು ಬಣ್ಣದ ಜ್ಯೂಸ್ ಇಟ್ಕೊಂಡು ಒಬ್ಬ ಮಾರಾಟಕ್ಕೆ ನಿಂತಿದ್ದ. ಕೋಕಂ ಜ್ಯೂಸ್ ಇರಬಹುದು ಅನ್ಕೊಂಡೆ. ಮಂಗ ಅವನ ಹತ್ತಿರ ಹೋಗಿ "ಕಾಗೆ ಕಾಲು ಗುಡ್ಡಕ್ಕೆ ಹೇಗೆ ಹೋಗ್ಬೇಕು?" ಅಂತ ಕೇಳ್ದ.
ಗುಟ್ಕಾ ಪ್ರಭಾವದಿಂದ ಕೆಂಪಗಾಗಿದ್ದ ತನ್ನ ಹಲ್ಲುಗಳನ್ನು ತೋರಿಸ್ತಾ ಯಾವುದೋ ಭಾಷೇಲಿ ಎದುರಿಗೆ ಇದ್ದ ದಟ್ಟ ಕಾಡಿನ ಕಡೆ ಕೈ ಮಾಡಿ ಏನೋ ಹೇಳ್ತಾ ಇದಾನೆ. ಅವನು  ಮಾತಾಡುವಾಗ 'ಇರುಕುದು', 'ಇಕ್ಕಡ' ಅನ್ನೋ ಪದಗಳೇನಾದ್ರೂ ಬರ್ತಾ ಇದ್ಯಾ ನೋಡ್ದೆ. ಊಹುಂ! ಅವನು ಮಾತಾಡ್ತಾ ಇರೋದು ತಮಿಳು, ತೆಲುಗು ಅಥವಾ ಭಾರತದ ಯಾವ ಭಾಷೇನೂ ಅಲ್ಲ ಅನ್ನಿಸ್ತು.

ಕಾಡಿನ ಕಡೆ ಕೈ ತೋರಿಸುತ್ತಿದ್ದ ಅಂಗಡಿಯವನು ಆ ಕಡೆಗೇ ನಡೆದುಕೊಂಡು ಹೊರಟ. "ಅಲ್ಲೇನಿದ್ಯೋ ನೋಡ್ಕೊಂಡು ಬರ್ತೀನಿ" ಅಂತ ನಮ್ಮ ಸ್ಯಾಂಡ್ ಅವನ ಹಿಂದೇನೆ ಹೊರಟ.
"ಬ್ಯಾಗ್ ಕೊಟ್ಟು ಹೋಗೋ. ಹಸಿವಾಗ್ತಿದೆ" ಅಂತ ಮಂಗ ಬ್ಯಾಗ್ ತಗೊಂಡು ತಿಂಡಿ ತೆಗೆಯೋಕೆ ಶುರು ಮಾಡ್ದ.

ಎಡಗಡೆಗೆ ಇದ್ದ ಕೋಟೆ ಏನಿಲ್ಲವೆಂದರೂ ಹತ್ತು ಅಡಿ ಎತ್ತರವಿತ್ತು. ಆ ಪಾಳು ಬಿದ್ದ ಕೋಟೆಗೆ ಮುಂಚೆ ಹೆಬ್ಬಾಗಿಲು ಇದ್ದಿರಬಹುದಾದ ಒಂದು ಜಾಗ, ಅದರ ಮುಂದೆ ದಾರಿ ಇತ್ತು.
"ಅಲ್ಲೇನಿದೆ ನೋಡೋಣ ಬಾ" ಅಂತ ಕರಡಿ ಆ ಕಡೆ ಹೊರಟ ಅವನ ಹಿಂದೆ ನಾನೂ ಹೊರಟೆ. ನನಗಿಂತ ಐದಾರು ಅಡಿ ಮುಂದೆ ಇದ್ದ ಕರಡಿ ಬಾಗಿಲು ದಾಟಿದ ಕೂಡಲೇ ಓಡೋಕೆ ಶುರು ಮಾಡಿದ!
"ಲೇ. ಸುಮ್ನೆ ಓಡಬೇಡ ನಿಲ್ಲೋ" ಅಂತ ನಾನು ಆ ಬಾಗಿಲು ದಾಟಿ ಬಲಗಡೆಗೆ ನೋಡ್ತೀನಿ ಒಬ್ಬ ಮೈಯೆಲ್ಲಾ ಸುಟ್ಟಂತಿದ್ದ ಮನುಷ್ಯ ಕೊಡಲಿಯಂಥ ವಸ್ತು ಹಿಡಿದು ನನ್ನ ಕಡೆಗೇ ಬರ್ತಿದ್ದ. ಕರಡಿ ಓಡಿದ್ದಕ್ಕೆ ಕಾರಣ ಗೊತ್ತಾಯ್ತು! ಮುಂದೆ ನೋಡ್ತೀನಿ ಕರಡಿ ಕಾಣ್ತಿಲ್ಲ! ಆ ಸಮಯದಲ್ಲಿ ಕೊಡ್ಲಿ ಮನುಷ್ಯ ನನ್ನ ಹಿಂದೆ ಬಂದು ನಿಂತುಬಿಟ್ಟಿದ್ದ! ಕೋಟೆಯ ದಾರಿ ಮುಂದೆ ಹೋಗುತ್ತಾ ಬಲಗಡೆಗೆ ತಿರುಗಿತ್ತು. ಕರಡಿ ಆ ಕಡೆಗೇ ಹೋಗಿರಬೇಕು ಅಂತ ತಿಳಿದು "ಮಂಗಾಆ..ಆ.. ಈ ಕಡೆ ಬರಬೇಡಾ... ವಾಪಸ್ ಹೋಗು.." ಅಂತ ಕೂಗ್ತಾ ನಾನೂ ಕೋಟೆಯ ದಾರೀಲಿ ಓಡೋಕೆ ಶುರು ಮಾಡಿದೆ.

ಹಾಗೇ ಒಂದು ಫರ್ಲಾಂಗ್ ನಷ್ಟು ಓಡಿದವನು ಒಂದು ಕಡೆ ಕೋಟೆ ಪಾಳು ಬಿದ್ದಿದ್ದನ್ನು ನೋಡಿ ಆ ಜಾಗದಿಂದ ಕೋಟೆಯ ಗೋಡೆ ಹತ್ತಿದ್ರೆ, ಯಾರಾದ್ರು ಬಂದ್ರೆ ಅವರ ಮೈ ಮೇಲೆ ಬೀಳಬಹುದು ಅಂತ ಲೆಕ್ಕ ಹಾಕಿ ಗೋಡೆ ಹತ್ತಿ ಮೇಲಿನ ಕೊನೇ ಕಲ್ಲಿನ ಮೇಲೆ ಕೂತು ಹಿಂದೆ ತಿರುಗ್ತೀನಿ ಆ ಕೊಡ್ಲಿ ಮನುಷ್ಯ ನನ್ನ ಹಿಂದೆಯೇ ಇದಾನೆ!
ಅವನು ಜೋರಾಗಿ ನಗುತ್ತಾ ಕೊಡಲಿ ಎತ್ತಿ ನನ್ನ ಕಡೆ ಬೀಸಿದ. ಅದರಿಂದ ತಪ್ಪಿಸಿಕೊಳ್ಳಬೇಕೆಂದು ನಾನು ಹಿಂದಕ್ಕೆ ಬಗ್ಗಿದೆ. ಅಷ್ಟೇ! ನಾನು ಕೂತಿದ್ದ ಕಲ್ಲು ಜಾರಿ ಹತ್ತು ಅಡಿ ಎತ್ತರದ ಗೋಡೆಯಿಂದ ಕೆಳಗೆ ಬಿದ್ದೆ.

ಒಂದೊಂದೇ ನೆನಪಾಯಿತು.
ಜ್ಯೂಸ್ ಅಂಗಡಿಯವನು ಇಟ್ಟುಕೊಂಡಿದ್ದ ಕೆಂಪಗಿನ ದ್ರವ ಏನು?!
ಅಂಗಡಿಯವನ ಮತ್ತೆ ಕೊಡ್ಲಿ ಮನುಷ್ಯನ ಹಲ್ಲು ಯಾಕೆ ಕೆಂಪಗಾಗಿದೆ?!
ಏನೇನೋ ಯೋಚನೆ ತಲೆಗೆ ಬಂತು.
ಆ ಕೊಡ್ಲಿ ಮನುಷ್ಯ ನನ್ನ ಕಡೆಗೇ ಬರುತ್ತಿದ್ದ. ಮೇಲಿಂದ ಬಿದ್ದ ಪೆಟ್ಟಿಗೋ, ಅವನನ್ನು ನೋಡಿದ ಭಯಕ್ಕೋ ನನ್ನ ಕಣ್ಣು ಮುಚ್ಚಿಹೋಯಿತು.

ನಾನು ಸತ್ತಿಲ್ಲ ಅಂತ ಮತ್ತೆ ನಾನು ಕಣ್ಣು ಬಿಟ್ಟಾಗ್ಲೇ ಗೊತ್ತಾಗಿದ್ದು. ಕಣ್ಣು ಬಿಟ್ಟ ಕೂಡ್ಲೇ ಕಂಡಿದ್ದು ಮಂಗ. ಹಂಗೇ ಸುತ್ತಲೂ ನೋಡಿದೆ, ಸ್ಯಾಂಡ್, ಕರಡಿ ಜೊತೆ ಜ್ಯೂಸ್ ಅಂಗಡಿಯವನು, ಕೊಡ್ಲಿ ಮನುಷ್ಯನೂ ಇದ್ದ!
"ಏ! ಹೊಡೀರೋ ಆ #$###$$**ಂಗೆ ಅಂತ ಹೇಳ್ತಾ ಎದ್ದು ಕೂತೆ"
ಕರಡಿ, ಮಂಗ, ಅಂಗಡಿಯವನು, ಕೊಡ್ಲಿ ಮನುಷ್ಯ ಎಲ್ಲರೂ ನಗ್ತಿದಾರೆ! ನಂಗೆ ಏನಾಗ್ತಿದೆ ಅಂತಾನೇ ಗೊತ್ತಾಗ್ತಿಲ್ಲ. ಸ್ಯಾಂಡ್ ಕಡೆ ನೋಡ್ದೆ, ಅವನ ಮುಖ, ಮೈ ಎಲ್ಲ ಮಣ್ಣಾಗಿದೆ.
"ಏನೋ ಸ್ಯಾಂಡ್ ಇದು? ಏನಾಗ್ತಿದ್ಯೋ ಇಲ್ಲಿ?" ಸ್ಯಾಂಡ್ ಹತ್ರ ಕೇಳ್ದೆ.
"ಇವ್ರದ್ದೇನೋ ಡಬ್ಬಾ 'ಸ್ಕೇರೀ ಫೋರ್ಟ್' ಅಂತೆ ಮಾರಾಯ! ಮಾಲ್ ಗಳಲ್ಲಿ 'ಸ್ಕೇರೀ ಹೌಸ್' ಇರುತ್ತಲಾ ಆ ಥರ ಅಂತೆ" ಅಂದ.

ಈ ದಿನ ನನಗಾದ ಪಾಡು ನೋಡಿ ನಗುತ್ತಾ, ಎರಡು ಮೂರು ಕಲ್ಲುಗಳನ್ನು ತೆಗೆದು ಕರಡಿ, ಮಂಗನ ಕಡೆಗೆ ಬೀಸಿ ಒಗೆದಾಗಿತ್ತು.


Photo Courtesy : Google  

~ ~ To view all the posts click on the Home Menu ~~

Friday 27 July 2012

ಆಯಸ್ಕಾಂತ

"ಈ ಮೊಬೈಲ್ ಅಲ್ಲಿ ಬ್ಯಾಟರಿನೆ ಇರಲ್ಲ ಗೇಮ್ ಆಡೋಣ ಅಂದ್ರೆ",
"ಲೋ! ಬ್ಯಾಟಲ್ ಫೀಲ್ಡ್ ಗೇಮ್ ಸಿ.ಡಿ. ಇದ್ರೆ ಕೊಡೋ ಆ ಗೇಮ್ ಆಡಿಲ್ಲ ನಾನು",
"ಒಂಥರಾ ಬೋರ್ ಹೊಡೀತಾ ಇದೆ ಕಣೆ! ಯಾವ್ದಾದ್ರು ಮೂವಿ ನೋಡೋಣ? ಟಿ.ವಿ. ಆನ್ ಮಾಡು, ಹೇಯ್! ಹ್ಯಾರಿ ಪಾಟರ್ ಬರ್ತಾ ಇದೆ ಕಣೆ. ಇರ್ಲಿ ಬಿಡು"
ಪೇಟೆಯಲ್ಲಿಯೇ ಹುಟ್ಟಿ, ಬೆಳೆದ ಅದೆಷ್ಟೋ ಸಣ್ಣ ಮಕ್ಕಳು ಇಷ್ಟು ಹೊತ್ತಿನ ತನಕ ಹೇಳಿದ ರೀತಿಲೇ ಮಾತಾಡ್ತಾ ಇರೋದನ್ನ ಕೇಳ್ತಾ ಇರ್ತೀವಿ. ಅದ್ಯಾಕೋ ಗೊತ್ತಿಲ್ಲ, ಕೆಲವು ಜನ ತಮ್ಮ ಮಕ್ಕಳಿಗೆ ಹೊರಗಡೆ ಹೋಗಿ ಆಟ ಆಡಲು ಬಿಡುವುದೇ ಇಲ್ಲ.
ಬಹುಷಃ ಅಂಥವರ ಮಕ್ಕಳಿಗೇ ಹೆಚ್ಚು ಬೋರ್ ಹೊಡೆಯುತ್ತೇನೋ?!!

ಅಂಥಾ ಸಮಯದಲ್ಲಿ..........

ನಿಮಗೆಲ್ಲ ಅದೆಷ್ಟು ನೆನಪಿದೆಯೋ ಗೊತ್ತಿಲ್ಲ ಆದರೆ ನಂಗೆ ಮಾತ್ರ ನಾ ಚಿಕ್ಕವನಿದ್ದಾಗ ಓದಿದ "ಬಾಲಮಂಗಳ", "ಗಿಳಿವಿಂಡು", "ಚಂಪಕ" ಪುಸ್ತಕಗಳು, ಅದರಲ್ಲಿ ಓದಿದ ಕೆಲವು ಕಥೆಗಳು ಇನ್ನೂ ನೆನಪಿದೆ.
ನಾವು ಕೂಗಿದರೂ ಬರ್ತಾನಾ ಅಂತ ನೋಡೋಕೆ "ಡಿಂಗಾಆ...ಆ...ಆ..ಆ" ಅಂತ  ಅದೆಷ್ಟು ಸಲ  ಕೂಗಿದೀವೋ ಗೊತ್ತಿಲ್ಲ.
ಅಮ್ಮ ಕೊಡೋ ಅವಲಕ್ಕಿಯನ್ನೋ, ಉಪ್ಪಿಟ್ಟನ್ನೋ  ಬಾಯಿಗೆ ಹಾಕಿಕೊಂಡು "ಶಕ್ತಿಮದ್ದು ತಿಂದೆ, ಇನ್ನು ನಂಗೆ ಶಕ್ತಿ ಬರುತ್ತೆ" ಅಂತ ಅದೆಷ್ಟು ಸಲ ಖುಷಿ ಪಟ್ಟಿದ್ದೀವೋ?
ಲಂಬೋದರನ ರೀತಿ ಅಂದುಕೊಂಡು ಅದೆಷ್ಟು ಸಲ ಚೆಂಡನ್ನು ಒದ್ದಿದ್ದೀವೋ?
ಫಕ್ರು "ಹಾರುವ ಪುಡಿಯನ್ನ" ಹಾಕಿದಂತೆ ರಂಗೋಲಿ ಪುಡಿಯನ್ನ ಗಿಡ, ಕಲ್ಲಿನ ಮೇಲೆ ಹಾಕಿ ಅದೂ ಹಾರುತ್ತಾ ಅಂತ ನೋಡಿಲ್ವಾ?

ಈ ಪುಸ್ತಕಗಳದ್ದು ಒಂದು ಕಥೆ ಆದ್ರೆ ನಾವು ಆಡ್ತಾ ಇದ್ದ ಆಟಗಳದ್ದು ಇನ್ನೊಂದು.
ಭೂತ ಕನ್ನಡಿ ಉಪಯೋಗಿಸಿ ಪೇಪರ್ ಸುಟ್ಟಿಲ್ವಾ ?

ತಲೆಗೆ ಎಣ್ಣೆ ಹಾಕಿ ಬಾಚಿಕೊಂಡು, ಬಾಚಣಿಗೆಯನ್ನು ಪೇಪರ್ ಚೂರುಗಳ ಮೇಲೆ ಹಿಡಿದು, ಆ ಚೂರುಗಳು ಬಾಚಣಿಗೆಗೆ ಅಂಟಿಕೊಳ್ಳೋದನ್ನ ನೋಡಿ, ನಾನು ಮ್ಯಾಜಿಕ್ ಮಾಡ್ದೆ ಅಂತ ಎಲ್ಲರಿಗೂ ಅದನ್ನ ತೋರಿಸಿಲ್ವ? 

ಔಷಧಿ ಬಾಟಲಿಯ ಮುಚ್ಚಲಕ್ಕೆ ತೂತು ಮಾಡಿ, ಒಂದು ಕಡ್ಡಿ, ರಬ್ಬರ್ ಬ್ಯಾಂಡ್ ಸಹಾಯದಿಂದ ಆ ಮುಚ್ಚಳ ಅದಾಗೇ ತಿರುಗೋ ಥರ ಮಾಡಿಲ್ವ?

ಕ್ಲಾಸ್ ಮುಗಿದ ಮೇಲೆ ಮಳೆ ಬರ್ತಾ ಇದ್ರೂ ಲೆಕ್ಕಿಸದೆ, ಅದೇ ಮಳೆಯಲ್ಲಿ ಗಂಟೆಗಟ್ಟಲೆ ಕ್ರಿಕೆಟ್, ವಾಲಿಬಾಲ್ ಆಡಿ ಮನೆಗೆ ಬಂದು ಬೈಸಿಕೊಂಡಿಲ್ವ?


ಆಯಸ್ಕಾಂತವನ್ನು ಮಣ್ಣಿನಲ್ಲಿ ಓಡಾಡಿಸಿ ಅದಕ್ಕೆ ಅಂಟಿಕೊಳ್ಳುವ ಕಪ್ಪು ಬಣ್ಣದ ಕಬ್ಬಿಣದ ಪುಡಿಯನ್ನ (ಅದು ಶುದ್ಧ ಕಬ್ಬಿಣದ ಪುಡಿಯೆಂದೆ ಆಗ ನಂಬಿದ್ವಿ ಬಿಡಿ) ಒಂದು ಕೊಟ್ಟೆಯಲ್ಲಿ ಶೇಖರಿಸಿ, ಕೆ.ಜಿ. ಗಟ್ಟಲೆ ತುಂಬಿ, ಆಮೇಲೆ ಅದನ್ನ ತೊಳೆದು ಅದರಲ್ಲಿರುವ ಮಣ್ಣಿನ ಕಣಗಳನ್ನ ಬೇರೆ ಮಾಡಿ ಇನ್ನೊಂದು ಸ್ವಲ್ಪ ತರೋಣ ಅಂತ ಮತ್ತೆ ಆಯಸ್ಕಾಂತವನ್ನು ಮಣ್ಣಿನಲ್ಲಿ ಓಡಾಡಿಸಿಲ್ವ? 

ಅದ್ಯಾರೋ ಆ ಕಬ್ಬಿಣದ ಪುಡಿಯನ್ನ ತೊಳೆದು ಉಂಡೆ ಕಟ್ಟಿ ಒಣಗಲು ಇಟ್ಟರೆ ಆ ಉಂಡೆಯೂ ಆಯಸ್ಕಾಂತ ಆಗುತ್ತೆ ಅಂತ ಹೇಳಿದ್ದಕ್ಕೆ, ಆ ಪ್ರಯತ್ನಾನೂ ಮಾಡಿಲ್ವಾ?


ನಿಮ್ಮ ಮಕ್ಕಳೂ ಅಯ್ಯೋ! ಬೇಜಾರು ಅಂತ ಹೇಳ್ತಾ ಇದ್ರೆ......

ಒಮ್ಮೆ ಯೋಚಿಸಿ ನೋಡಿ !



Photo Courtesy : Google !


~ ~ To view all the posts click on the Home Menu ~~

Tuesday 10 July 2012

ಗಿಳಿರಾಯ

ಮಳೆರಾಯನಾರ್ಭಟಕೆ  ಸಿಕ್ಕನೋ ಗಿಳಿರಾಯ
    ಕಂದನಿಗಾಹಾರ ತರುತಲಿರುವಾಗ 
ಆಗಿದೆ ಕಾಲಿನಾ ಬುಡದಲ್ಲಿ ಗಾಯ 
    ಹಾರುವುದಕದರಿಂದ ತೊಂದರೆಯು ಈಗ
ಕಂದನಾ ನೆನೆಯುತಿರೆ ನೋವೆಲ್ಲ ಮಾಯ
    ಕತ್ತಲಾ ಸೆರಗಲಿ ಇಮ್ಮಡಿಸಿದೆ ವೇಗ

ಇತ್ತಕಡೆ ಮರಿ ಗಿಳಿಗೆ ಗುಡುಗು-ಸಿಡಿಲಿನಾ ಭಯ
    ಮೈಯೆಲ್ಲ, ಗೂಡೆಲ್ಲ ಒದ್ದೆಯಾ ಭಾಗ
ಮಿಂಚೊಂದು ಹೊಂದಿದೆ ಅಂಕು-ಡೊಂಕು ಮೈಯ್ಯ
    ಗಿಳಿಗೂಡ ಸವರಿತು ತನ್ನಯ ತರಂಗ 
ತಲುಪಿದನು ತನ ಗೂಡ ನಮ್ಮ ಗಿಳಿರಾಯ
    ಗೂಡು, ಕಂದಗಳೆರಡು ನೆಲದಲ್ಲಿ ಲಾಗ 

ಎತ್ತುತಾ ಕಂದನಾ, ಮೀರದೆಯೇ ಸಮಯ
    ಹೊರಟನು ಗಿಳಿರಾಯ ಹುಡುಕುತ್ತ ಜಾಗ 
ಇದಕಂಡು ಮರುಗಿದನೋ ಜಡಿಯ ಮಳೆರಾಯ 
    ಹಾಡುವುದ ನಿಲ್ಲಿಸಿದ ತನ್ನಯಾ ರಾಗ 
ಇಲ್ಲಿಗೇ ಮುಗಿಸಿದಳು ಅಜ್ಜಿಯೂ ಕಥೆಯ 
    ಮೊಮ್ಮಗಳ ನಿದ್ದೆಗೆ ಇನ್ನಿಲ್ಲ ಭಂಗ


Photo Courtesy : Google !

~ ~ To view all the posts click on the Home Menu ~~

Wednesday 13 June 2012

ಕೊರೆತ !!

ನಾವೆಷ್ಟು ಮೂರ್ಖರು! ಅದೆಷ್ಟು Negative?
ನಮಗೆ ಡ್ಯಾನ್ಸ್ ಮಾಡೋಕೆ ಬರ್ತಿರತ್ತೆ, ಆದ್ರೆ ನಾವು ಯೋಚನೆ ಮಾಡೋದು ನಮಗೆ ಬಂದಿರೋ ಬಿಳಿ ಕೂದಲಿನ ಬಗ್ಗೆ.
ನಮಗೆ ನೂರಾರು ಜನ Friends ಇರ್ತಾರೆ ಆದ್ರೆ ನಾವು ಯೋಚನೆ ಮಾಡೋದು ನಾವು ಉಳಿಸಿಕೊಂಡಿರೋ Subject ಗಳ ಬಗ್ಗೆ.
ನಾವು ಬರೆದಿರೋ Exam ಅಲ್ಲಿ ಚೆನ್ನಾಗೇ Marks ಬಂದಿರತ್ತೆ ಆದ್ರೆ ನಾವು ಯೋಚನೆ ಮಾಡೋದು ಕ್ರಿಕೇಟ್ ಅಲ್ಲಿ First Ball ಗೆ Out ಆಗ್ತೀನಿ ಅಂತ.
ನಮಗೆ ಚೆನ್ನಾಗಿ Painting ಮಾಡೋಕೆ ಬರ್ತಿರತ್ತೆ ಆದ್ರೆ ನಾವು ಯೋಚನೆ ಮಾಡೋದು ನಮಗೆ ಒಳ್ಳೇ ಕೆಲಸ ಸಿಕ್ಕಿಲ್ಲ ಅಂತ.
ನಾವು ಚೆನ್ನಾಗಿ ಅಡುಗೆ ಮಾಡಬಲ್ಲವರಾಗಿರುತ್ತೇವೆ ಆದ್ರೆ ನಾವು ಯೋಚನೆ ಮಾಡೋದು ನಮ್ಮನ್ನು ಯಾರು ಇಷ್ಟ ಪಡ್ತಾ ಇಲ್ವೋ ಅವರ ಬಗ್ಗೆ.
ನಮಗೆ Computer ಬಗ್ಗೆ ಏನೇನೋ ಗೊತ್ತಿರತ್ತೆ ಆದ್ರೆ ನಾವು ಯೋಚನೆ ಮಾಡೋದು ನಾನು ಇಷ್ಟೊಂದು ದಪ್ಪ ಇರಬಾರದಿತ್ತು ಅಂತ.

ನಮಗೆ ಯಾವ ವಿಷಯದ ಬಗ್ಗೆ ಚೆನ್ನಾಗಿ ಗೊತ್ತೋ ಅದರ ಬಗ್ಗೆನೇ ಯೋಚನೆ ಮಾಡೋದಾದ್ರೆ, Positive ಆಗಿ Think ಮಾಡೋದಾದ್ರೆ, ನಮಗೆ ಯಾವ ವಿಷಯ ಗೊತ್ತಿಲ್ಲ ಅನ್ನೋ ವಿಷಯಾನೇ ಮರೆತು ಹೋಗತ್ತೆ !
......................................................................................................................................
ನೀವು ಡಾನ್ಸ್ ಮಾಡಿ, ಹಾಡು ಹೇಳಿ, ಗಿಟಾರ್ ಬಾರಿಸಿ, ಫೋಟೋ ತೆಗೆಯಿರಿ, ಚಿತ್ರ ಬರೆಯಿರಿ, ಕವಿತೆ ಬರೆಯಿರಿ, ಆಟ ಆಡಿ ಅಥವಾ ನಿಮಗೆ ಇಷ್ಟ ಬಂದಿದ್ದು ಏನೇ ಮಾಡಿ; ಜನ ನಿಮ್ಮನ್ನ ಅವರ ಮನಸಲ್ಲೇ ಭೇಷ್ ಅನ್ನೋದು ಅವರಿಗೆ ನೀವು ಏನು ಮಾಡ್ತಿದ್ದೀರ ಅಂತ ಗೊತ್ತಾಗದೇ ಇದ್ದಾಗ ಅಥವಾ ನೀವು ಏನು ಮಾಡ್ತಾ ಇದೀರೋ ಅದನ್ನ ಅವರಿಗೆ ಮಾಡೋಕೆ ಆಗದೆ ಇದ್ದಾಗ.
......................................................................................................................................
ಹಿಂದಿನ ಕೆಲವು ಜನರ ಯೋಚನೆ ಇಂದಿನ ನಮ್ಮ ಜ್ಞಾನ. ಹಾಗಾಗಿ ನೀವು ಈಗ ಯೋಚಿಸಿದರೆ, ಮುಂದೆ ಅದು ಇನ್ನೊಬ್ಬರ ಜ್ಞಾನ ಆಗಬಹುದು !
......................................................................................................................................
ಏಕೆ ಯೋಚನೆ? ನಿಮ್ಮ ಸಮಸ್ಯೆಯನ್ನು ನೋಡಿ ಮುಗುಳುನಗಲು ಸಾಧ್ಯವಿರುವಾಗ.
ಏಕೆ ಓಟ? ನಿಮ್ಮ ಸಮಸ್ಯೆಯನ್ನು ಒದೆಯಲು ಸಾಧ್ಯವಿರುವಾಗ.
ಏಕೆ ಸಾವು? ನಿಮ್ಮ ಸಮಸ್ಯೆಯೊಂದಿಗೆ ಹೋರಾಡಲು ಸಾಧ್ಯವಿರುವಾಗ.
ಏಕೆ ಅಳು? ನಿಮ್ಮ ಸಮಸ್ಯೆಯನ್ನು ನೋಡಿ ನಗಲು ಸಾಧ್ಯವಿರುವಾಗ.
ಏಕೆ ಬೀಳು? ನಿಮ್ಮ ಸಮಸ್ಯೆಯ ಮೇಲೆ ಹಾರಲು ಸಾಧ್ಯವಿರುವಾಗ.
ಏಕೆ ಅದರೊಂದಿಗೆ ಗೆಳೆತನ? ನಿಮ್ಮ ಸಮಸ್ಯೆಯನ್ನು ಕೊಲ್ಲಲು ಸಾಧ್ಯವಿರುವಾಗ.

ಸಮಸ್ಯೆಯೊಂದಿಗೇ ಇರಿ.
ಸಮಸ್ಯೆಯೊಂದಿಗೇ ಬಾಳಿ.
ಆದರೆ ಮಲಗುವ ಮುನ್ನ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.
......................................................................................................................................
ಪ್ರತಿಯೊಬ್ಬರೂ ನಿಮ್ಮನ್ನು ಕಡೆಗಾಣಿಸುತ್ತಿದ್ದಾರೆಯೇ ?? ಅವರು ಕಡೆಗಾಣಿಸುತ್ತಿರುವುದನ್ನು ಕಡೆಗಾಣಿಸಿ ನೀವು ಏನು ಕೆಲಸ ಮಾಡ್ತಾ ಇದೀರೋ ಅದನ್ನು ಮುಂದುವರಿಸಿ.
......................................................................................................................................
ನೀವು ಬಹಳ ಸಲ ದೂರ ಮಾಡಿದ ವ್ಯಕ್ತಿ ನಿಮ್ಮನ್ನು ಖಂಡಿತ ಸಂಪರ್ಕಿಸಲು ಪ್ರಯತ್ನಿಸುವುದಿಲ್ಲ, ದೂರ ಮಾಡಿದ್ದಕ್ಕೆ ಕಾರಣವಿದೆ ಎಂದು ಅವರನ್ನು ನೀವು ನಂಬಿಸುವವರೆಗೆ. 
......................................................................................................................................
ಬೇರೆಯವರು ನಿಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂದು ಯೋಚಿಸುತ್ತಾ ಕೂರುವುದು ಸಮಯ ವ್ಯರ್ಥವಷ್ಟೇ. 
......................................................................................................................................
ಏನಾದರೂ ಒಳ್ಳೆಯದಾದರೆ ಅದಕ್ಕೆ ಇನ್ನೊಬ್ಬರು ಕಾರಣ ಅಂದುಕೊಳ್ಳಿ - ಅವರ ಮೇಲಿನ ನಿಮ್ಮ ಭಾವನೆ ಯಾವಾಗಲೂ ಒಳ್ಳೆಯದಾಗಿಯೇ ಇರುತ್ತದೆ.
ಏನಾದರೂ ತಪ್ಪಾದರೆ ಅದಕ್ಕೆ ನೀವೇ ಕಾರಣ ಅಂದುಕೊಳ್ಳಿ - ಅದೇ ತಪ್ಪು ನಿಮ್ಮಿಂದ ಇನ್ಯಾವತ್ತೂ ಆಗುವುದಿಲ್ಲ. 
......................................................................................................................................
ಅವರು ಏನು ಮಾಡಿದರು, ಹೇಗೆ ವರ್ತಿಸಿದರು ಅನುವುದರ ಬಗ್ಗೆ ಯೋಚಿಸಬೇಡಿ
ಬದಲಿಗೆ ನೀವು ಏನು ಮಾಡಬೇಕು, ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಯೋಚಿಸಿ 
......................................................................................................................................
ನೀವು ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದೀರ ಅಂತ ನೀವು ಭಾವಿಸಿದ ಕ್ಷಣ, ಆ ಒಳ್ಳೆಯ ಕೆಲಸ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಮನಸಿನಲ್ಲಿ ತನ್ನ ಮೌಲ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. 
..........................................................................................................................
ಇದನ್ನು ನಂಬಿರಿ !
"ನಿಮ್ಮ ಜೀವನದಲ್ಲಿ ಬಂದ / ಬರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮುಖ್ಯ."
ನೀವು ಯಾರನ್ನೂ ದ್ವೇಷಿಸಲಾರಿರಿ ! 
..........................................................................................................................
ಜಗಳ ಆಗಬಾರದು ಎಂದಿದ್ದರೆ ಕೆಲವು ಸಲ ನಮ್ಮ ಎದುರಿನವರು ಸುಳ್ಳು ಹೇಳುತ್ತಿದ್ದರೂ, ಅದು ಸುಳ್ಳು ಎಂದು ನಮಗೆ ಗೊತ್ತಿದ್ದರೂ, ನಾವು ಸುಮ್ಮನೆ ಹೌದೆಂದು ತಲೆ ಅಲ್ಲಾಡಿಸಬೇಕಾಗುತ್ತದೆ ! 
..........................................................................................................................
ಈಗಿನ 'ಈಗ' ಮುಂದೆ 'ಆವಾಗ' ಆಗತ್ತೆ.
'ಆವಾಗ' ಈ 'ಈಗ' ಇನ್ನೂ ಚೆನ್ನಾಗಿರಬೇಕು ಅಂತ ನಿಮಗೆ 'ಈಗ' ಅನ್ನಿಸ್ತ ಇದ್ಯ ?
..........................................................................................................................
ಒಂದನ್ನೇ ಆರಿಸಬೇಕು ಎಂದಿದ್ದರೂ, ನಿಮಗೆ ಬಹಳ ಆಯ್ಕೆಗಳು ಸರಿ ಎನಿಸಿದರೆ ಅವೆಲ್ಲವನ್ನೂ ಮಾಡಿ!
ಇಷ್ಟ ಪಟ್ಟಿದ್ದನ್ನೇ ಮಾಡಿದ ತೃಪ್ತಿ ನಿಮಗಿರುತ್ತದೆ.
ವಿ.ಸೂ. ಪರೀಕ್ಷೆಯಲ್ಲಿ ಕೊಟ್ಟ ಆಯ್ಕೆಗಳಿಗೆ ಇದನ್ನು ಅನ್ವಯಿಸಬೇಡಿ !
..........................................................................................................................
Decent ಆಗ್ ಇರೋ ಒಂದು profile picture ಹಾಕು
ಅಪರೂಪಕ್ಕೊಮ್ಮೆ Cover Photo Change ಮಾಡು
Photo / Video / STATUS upload ಮಾಡ್ಕೋ, TAG ಮಾಡು
ಬೇರೆ Updates ನ Like ಮಾಡು comment ಹೊಡಿ
ನೀನೆ ಒಂದು Group Create ಮಾಡು
"ನಾಳೆ ಬೆಳಗ್ಗೆ full Energy ಸಿಗತ್ತೆ" ಅನ್ಕೊಂಡು ಇಡೀ ದಿನ Game ಆಡು
ಯಾರೋ Request Send ಮಾಡ್ತಾರೆ ಚೆನ್ನಾಗಿದ್ರೆ Accept ಮಾಡ್ಕೋ
ಬೇಜಾರ್ ಆದಾಗ ಕೂತ್ಕೊಂಡ್ Chat ಮಾಡು!
ಹಳೆ Classmates ಹೊಸ Friendsದು ಫೋನ್ ನಂಬರ್ ತಗೋ
ಮೇಲೆ ಕೆಳಗೆ, ಕೆಳಗೆ ಮೇಲೆ Scroll ಮಾಡು!

ಇನ್ನೇನು ಉಳಿತ್ರಪ್ಪ facebook ಅಲ್ಲಿ????
..........................................................................................................................

~ ~ To view all the posts click on the Home Menu ~~

Friday 8 June 2012

"ಜೀವಿಗಳು" - ಒಂದು ಕಥೆ

"ನಿನ್ನೆ ರಾತ್ರಿ ಅರ್ಜೆಂಟ್ ಆಯ್ತು ಅಂತ ಟಾಯ್ಲೆಟ್ ಗೆ ಹೋದೆ."
"ಟಾಯ್ಲೆಟ್ ಗೆ ಅರ್ಜೆಂಟ್ ಆದಾಗ ಹೋಗದೆ ನಿದ್ದೆ ಬಂದಾಗ ಹೋಗ್ತಾರ?"
"ಅಲ್ಲಿ ನನ್ನ ಕೆಲಸ ಎಲ್ಲಾ ಮುಗಿದ ಮೇಲೆ ಬಾಗಿಲು ತೆಕ್ಕೊಂಡು ಹೊರಗೆ ಬಂದೆ."
"ಎಲ್ಲಾ ಮುಗಿದ ಮೇಲೆ ಹೊರಗೆ ಬರದೆ ಟಾಯ್ಲೆಟ್ ಅಲ್ಲೇ ಮಲಗ್ತಾರಾ ಯಾರಾದ್ರು? ತಲೆ ಸರಿ ಇದ್ಯ ನಿಂಗೆ?"
"ಲೇಯ್! ಏನಾಯ್ತು ಅಂತ ಹೇಳೋಕೆ ಬಿಡ್ತೀಯಾ ಇಲ್ವಾ?"
"ಬಿಡಲ್ಲ. ಏನಿವಾಗ?"
"ಹಾಳಾಗ್ ಹೋಗು! ನಾನ್ ಹೇಳ್ತೀನಿ. ಬೇಕಾದ್ರೆ ಕೇಳಿಸ್ಕೋ, ಬೇಡಾಂದ್ರೆ ಇದೇ ರೀತಿ ಉಲ್ಟಾ ಮಾತಾಡ್ತಾ ಇರು"
"ಸುಮ್ನೆ ಕೊರೀಬೇಡ. ಮುಂದೆ ಹೇಳು ಮಾರಾಯ"
"ಬಾಗಿಲು ತೆಕ್ಕೊಂಡು ಹೊರಗಡೆ ಬರ್ತೀನಿ ಐದಾರು ಮೆಟ್ಟಿಲು ಎದುರಿಗೆ"
"ಥೋ! ಅದರಲ್ಲಿ ಏನಿದೆ ವಿಶೇಷ?"
"ಮಂಗ ಮುಂಡೇದೆ! ನಮ್ಮನೆ ಟಾಯ್ಲೆಟ್ ಎದುರಿಗೆ ಮೆಟ್ಟಿಲು ಎಲ್ಲೋ ಇದೆ?"
"ಅರೇ! ಹೌದಲ್ವ?"
"ಹೂಂ ಮತ್ತೆ. ಹಾಳಾದ್ದು ಆಗಲೇ ಕರೆಂಟ್ ಹೋಗ್ಬೇಕಾ? ಕೈಯಲ್ಲಿ ಟಾರ್ಚ್ ಬೇರೆ ಇಲ್ಲ."
"ಮೈಯೆಲ್ಲಾ ಒಂದು ಸಲ ಜುಂ ಅಂತೇನೋ ಅಲ್ವ? ಬೆಳ್ಳಗೆ ಯಾವ್ದಾದ್ರು ಮೋಹಿನಿ ಕಂಡ್ಲ?"
"ಹೂಂ! ಜಯಂತಿ, 'ತಂಗಾಳಿಯಲ್ಲಿ ನಾನು' ಅಂತ ಹೋಗ್ತಾ ಇದ್ಲು. ಥೂ! ಕೇಳ ಮುಂದೆ. ಆ ಮೆಟ್ಟಿಲು ಇಳಿದು ಕೆಳಗೆ ಹೋದೆ. ತಕ್ಷಣ ಆ ಮೆಟ್ಟಿಲು ಮೇಲ್ಗಡೆ ಏನೋ ಶಬ್ದ ಆಯ್ತು. ಏನು ಅಂತ ತಿರುಗೋದ್ರೊಳಗೆ ಛಕ್ ಅಂತ ಬೆಳಕು"
"ಛಕ್ ಅಂತ ಶಬ್ದಾನು ಬಂತ ಅಥವಾ ಬರೀ ಬೆಳಕು ಮಾತ್ರ ಬಂತಾ?"
"ಶಬ್ದಾನು ಬಂತು ಕಣೋ! ಮೊದ್ಲು ಕರೆಂಟ್ ಬಂತು ಅನ್ಕೊಂಡೆ, ನೋಡಿದ್ರೆ ಕಣ್ಣು ಬಿಡೋಕೆ ಆಗ್ತಿಲ್ಲ. ಎಂಟ್ಹತ್ತು ಲಾರಿ ಎದುರಿಗೆ ನಿಲ್ಲಿಸ್ಕೊಂಡು  ಹೆಡ್ ಲೈಟ್ ಆನ್ ಮಾಡಿರೋ ಅಷ್ಟು ಬೆಳಕು ಇತ್ತು. ಬರೀ ಒಂದು ಕಡೆ ಅಲ್ಲ, ಸುತ್ತಲೂ!"
"ಆಮೇಲೆ?"
"ನಂಗೆ ಒಂದು ಸಲ ಏನಾಗ್ತಿದೆ ಅಂತಾನೆ ಗೊತ್ತಾಗ್ಲಿಲ್ಲ. ಕೃಷ್ಣ, ರಾಮ, ಅಲ್ಲಾ, ಈಶ್ವರ, ಏಸು, ಬುದ್ಧ ಎಲ್ಲಾರ್ನು ಕರೆದೆ. ಯಾರು ಬರ್ಲೇ ಇಲ್ಲ!"
"ಸಂಕಟ ಬಂದಾಗ ವೆಂಕಟರಮಣ! ಅವರನ್ನ ಕರೆದ್ಯಾ?"
"ಅವರೊಂದು ನೆನಪಾಗಿಲ್ಲ ನೋಡು! ಅಷ್ಟೊತ್ತಿಗೆ ಬೆಳಕಿಗೆ ನನ್ನ ಕಣ್ಣು ಅಡ್ಜಸ್ಟ್ ಆಗಿತ್ತು ಅನ್ಸುತ್ತೆ, ಒಂದೊಂದೇ ವಸ್ತುಗಳು ಕಾಣೋಕೆ ಶುರು ಆಯ್ತು"
"ಏನು ಕಾಣಿಸ್ತು?"
"ಮೊದ್ಲು ಸುತ್ತಲೂ ವೈರುಗಳು, ಕಂಪ್ಯೂಟರ್ ಥರದ್ದೇ ದೊಡ್ಡ ದೊಡ್ಡ ಮೆಷೀನುಗಳು ಕಂಡ್ವು."
"ರಜನಿಕಾಂತ್ ಫಿಲಂ ಅಲ್ಲಿ ಇದ್ದಂಗೆ! ಆಮೇಲೆ?"
"ಒಂಥರಾ ಹಂಗೆ ಇತ್ತು! ಬರೀ ಮೆಷೀನುಗಳು ಅನ್ಕೊಂಡ್ರೆ ನಾಕೈದು ಜನ ಕಂಡ್ರು, ಥೋ! ಜನ ಅಲ್ಲ, ಜೀವಿಗಳು!!"
"ಅನ್ಯ ಲೋಕದವ್ರಾ?"
"ಇರಬೇಕು! ಮನುಷ್ಯರ ಥರಾನೇ ಇದ್ವು, ಆದ್ರೆ ತಲೇನೇ ಇರ್ಲಿಲ್ಲ!"
"ಆಂ!"
"ಹೌದೋ. ಒಂಥರಾ ಬಿಳೀ ಬಟ್ಟೆ ಮೇಲೆ ಪೆನ್ಸಿಲ್ ಅಲ್ಲಿ ಗೀಚಿರೋ ರೀತಿ ಬಟ್ಟೆ ಹಾಕ್ಕೊಂದಿದ್ವು. ಅದು ಬಟ್ಟೆನಾ ಅಥವಾ ಅದರ ಮೈ ಇರೋದೇ ಆ ರೀತಿನಾ ಗೊತ್ತಾಗ್ಲಿಲ್ಲ!"
"ಆಮೇಲೆ? ಅವೇನಾದ್ರೂ ಮಾಡಿದ್ವಾ?"
"ಅವು ಒಂದು 25 - 30 ಅಡಿ ದೂರದಲ್ಲಿ ಇದ್ವು. ಅದೇ ಸಮಯದಲ್ಲಿ ನಾನು ಎಲ್ಲಿದೀನಿ ನೋಡಿ ಬಿಡೋಣ ಅಂತ ಮೇಲೆ, ಕೆಳಗೆ, ಸುತ್ತಲೂ ನೋಡಿದೆ"
"ಏನಿತ್ತು?"
"ಅದು ಆ ಜೀವಿಗಳ ವಾಹನ ಇರ್ಬೇಕು. ಆದ್ರೆ ಹಾರುವ ತಟ್ಟೆ ಥರ ಇರ್ಲಿಲ್ಲ, ಬದಲಿಗೆ ಕೋನ್ ಐಸ್ ಕ್ರೀಮ್ ಥರ ಇತ್ತು. ಹಿಂದೆ ತಿರುಗಿ ನೋಡ್ತೀನಿ ನಾನು ನಿಂತಿದ್ದ ಜಾಗಾನೆ ವಾಹನದ ತುದಿ!"
"ಹೊರಗೆ ಬಂದ್ಯಾ ಕೂಡ್ಲೇ?"
"ಇಲ್ಲ! ಸುಮ್ನೆ ಆ ಜೀವಿಗಳು ಇದ್ದ ಕಡೆ ನೋಡೋಣ ಅಂತ ತಿರುಗ್ತೀನಿ ನನ್ ಎದುರಿಗೇ ಬಂದು ನಿಂತಿವೆ ಎರಡು ಜೀವಿಗಳು! ಒಂದರ ಕೈಯಲ್ಲಿ ಕತ್ತರಿ ರೀತೀದೆ ಒಂದು ವಸ್ತು ಮತ್ತೆ ಕುಕ್ಕರ್ ಥರದ್ದು ಒಂದು ಪಾತ್ರೆ ಇತ್ತು"
"ಆಮೇಲೆ?"
"ನಂಗೆ ಹೆದರಿಕೆ! ನನ್ನ ತಲೇನೂ ಕತ್ತರಿಸಿ ಅವರ ಥರಾನೇ ಮಾಡ್ತಾರೇನೋ ಅಂತ. ಬರೀ ಕೈಯಲ್ಲಿ ನಿಂತಿದ್ದ ಜೀವಿ ಒಂದು ಕೈಯಲ್ಲಿ ನನ್ನ ಹಿಡ್ಕೊಳ್ತು. ನಾನು ತಪ್ಪಿಸ್ಕೊಳ್ಳೋಕೆ ಪ್ರಯತ್ನ ಮಾಡ್ತಾ ಇದೀನಿ, ಆಗ್ತಾನೇ ಇಲ್ಲ! ಹಂಗೋ ಹಿಂಗೋ ತಪ್ಪಿಸ್ಕೊಂಡು ಓಡಬೇಕು ಅನ್ನೋ ಅಷ್ಟರಲ್ಲಿ ಆ ಜೀವಿ ನನ್ನ ಕಾಲಿಗೆ ತನ್ನ ಕಾಲು ಅಡ್ಡ ಕೊಡ್ತು. ನಾನು ಬೋರಲಾಗಿ ಬಿದ್ದೆ. ಕಣ್ಣೆಲ್ಲ ಮಂಜು ಮಂಜು. ಆಗಲೇ ಆ ಜೀವಿ ಕುಕ್ಕರ್ ಥರದ ಪಾತ್ರೆ ಒಳಗಿಂದ ಒದ್ದೆಯಾಗಿ ನೀರಿನ ರೀತಿ ಇರೋ ಏನೋ ಒಂದನ್ನ ತೆಗೆದು ನನ್ನ ಮುಖಕ್ಕೆ ಹಚ್ಚೋಕೆ ಶುರು ಮಾಡ್ತು. ನಾನು ನನ್ನ ಶಕ್ತಿ ಎಲ್ಲಾ ಕೂಡಿಸಿ ನನ್ನ ಕೈ ಎತ್ತಿ ಅದರ ಕೈಗೆ ಹೊಡೆದೆ. ನಮ್ಮನೆ ನಾಯಿ ಕುಂಯ್ ಕುಂಯ್ ಅಂತ ಓಡಿ ಹೋಯ್ತು !!"
"ಅಂದರೆ ಇಲ್ಲೀ ತನಕ ನೀನು ಹೇಳಿದ್ದು?"
"ನೀನು ಏನು ತಿಳಿದುಕೊಂಡೆಯೋ ಅದೇ!"
"ಛೀ!! ಅದ್ಕೆ ಈ ಹಾಸಿಗೆ ಇಲ್ಲಿ ಒಣಗೋಕೆ ಹಾಕಿರೋದು. ರಾತ್ರಿ ಟಾಯ್ಲೆಟ್ ಅಂತ ಇದರಲ್ಲೇ?!! ಯಪ್ಪಾ! ಥೂ!"
"ಈಗ ಅದೆಲ್ಲ ಇರ್ಲಿ! ಮೊನ್ನೆ ಶುಕ್ರ ಗ್ರಹಣ ನೋಡಿದ್ಯಾ?"

Photo Courtesy : Google

~ ~ To view all the posts click on the Home Menu ~~

Tuesday 5 June 2012

ಪರಿಸರ ದಿನ


ಇವತ್ತು ವಿಶ್ವ ಪರಿಸರ ದಿನ ಅಂತ ಗೊತ್ತಾದ ಕೂಡಲೇ ನನಗೆ ನೆನಪಾದ ಘಟನೆ !

ನಾ ಚಿಕ್ಕವನಿದ್ದಾಗ ಯಾವಾಗಲೋ ಒಂದು ದಿನ ಎಲ್ಲೋ ಒಂದು ಕಡೆಗೆ ಅಮ್ಮನ ಜೊತೆಗೆ  ಬಸ್ಸಿನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆ ಜೋರು ಹಸಿವಾಯ್ತು ( ಸಣ್ಣ ಮಕ್ಕಳಿಗೆ ಅದೊಂಥರ ಖಾಯಿಲೆ ಅನ್ನಿ). ಸರಿ! ಅಮ್ಮನ ಬಳಿ ಗಲಾಟೆ ಆರಂಭ "ಅಮ್ಮಾ! ಏನಾದ್ರು  ಕೊಡ್ಸೆ?" ಅಂತ. ಅವಳಿಗೂ ಬೈದು ಬೈದು ಸುಸ್ತಾಯ್ತು ಅನ್ಸತ್ತೆ ಯಾವ್ದೋ ಒಂದು ಕಡೆ ಬಸ್ಸು ನಿಲ್ಲಿಸಿದಾಗ "ಏನ್ ಬೇಕೋ ತಗೊಂಡ್ಬಾ" ಅಂತ ದುಡ್ಡು ಕೊಟ್ಳು ! ನಾನು ಖುಷಿಯಿಂದ ಹೋಗಿ ಒಂದು ಪ್ಯಾಕು ಬಿಸ್ಕೆಟ್ , ಒಂದು ಪ್ಯಾಕು ಚಿಪ್ಸ್ ತಗೊಂಡು ಬಂದೆ. ಮೊದ್ಲು ಚಿಪ್ಸ್ ತಿನ್ನೋಣ ಅಂತ ತಿನ್ನೋಕೆ ಶುರು ಮಾಡ್ದೆ. ಹಸಿವಾಗಿದ್ದಕ್ಕೋ ಏನೋ ಬೇಗ ಖಾಲಿ ಆಯ್ತು. ಚಿಪ್ಸ್ ತಿಂದು ಆದ್ಮೇಲೆ ಖಾಲಿ ಕವರ್ ಹಿಡ್ಕೊಂಡು ಏನ್ ಮಾಡ್ತಾರೆ? ಹೊರಗೆ ಎಸೆಯೋಣ ಅಂತ ಕಿಟಕಿಯಿಂದ ಕೈ ಹೊರಗೆ ಹಾಕಿದ್ದೆನಷ್ಟೆ, ಅಮ್ಮ ನನ್ನ ಕೈಯನ್ನು ಹಿಡಿದು ಒಳಗೆ ಎಳೆದುಕೊಂಡಳು. ಈ ಸಲ ನಾನೇನು ತಪ್ಪು ಮಾಡಿದೆ ಅಂತ ಅನ್ಕೊಳ್ತಾ ಇರ್ಬೇಕಾದ್ರೆ ಆ ಪ್ಲಾಸ್ಟಿಕ್ ಕವರ್ ಅನ್ನು ನನ್ನ ಕೈಯಿಂದ ತಗೊಂಡು, ನನ್ನ ಕಿವಿ ಹಿಂಡುತ್ತಾ "ಎಷ್ಟು ಸಲ ಹೇಳಿದೀನಿ ನಿಂಗೆ? ಹೊರಗೆ ಎಲ್ಲೂ ಕಸ ಹಾಕಬೇಡ, ಮನೆಗೆ ತಗೊಂಡು ಬಂದು ಮನೇಲೆ ಕಸದ ಬುಟ್ಟಿಗೆ ಹಾಕು ಅಂತ" ಅಂತ ಹೇಳಿ ಆ ಪ್ಲಾಸ್ಟಿಕ್ ಕವರ್ ನ ಅವಳ ಹತ್ರ ಇದ್ದ ಬ್ಯಾಗ್ ಒಳಗಡೆ ಹಾಕಿಕೊಂಡಳು. ನಮ್ಮ ಸಣ್ಣ ಬುದ್ದಿ ಎಲ್ಲಿಗ್ ಹೋಗತ್ತೆ? "ಅಲ್ಲಿ ಗುಡಿಸುತ್ತ ಇದ್ರು  ಹೆಂಗಿದ್ರು ಗುಡಿಸ್ತಾರಲ್ಲ ಅದ್ಕೆ ಹಾಕೋಕೆ ಹೋದೆ" ಅಂದೆ.
"ಅವ್ರು ಗುಡಿಸಲಿ ಬಿಡಲಿ, ನೀನು ಮನೆಗೆ ತಗೊಂಡು ಬರೋಕೆ ಏನ್ ತೊಂದ್ರೆ ನಿಂಗೆ?" ಅಂತ ಹೇಳಿ ದೊಡ್ಡಕ್ಕೆ ಕಣ್ಣು ಬಿಟ್ಲು. ನಾನು ಮೂತಿ ಉದ್ದ ಮಾಡಿ ಸುಮ್ಮನೆ ಕುಳಿತೆ. ಅವತ್ತಿನ ಮಟ್ಟಿಗೆ ನಂಗೆ ಸಿಟ್ಟು ಬಂದಿದ್ರೂ ಆ ಘಟನೆ ಆದ ಮೇಲೆ ಇಲ್ಲಿಯವರೆಗೂ ನಾನು ಹೊರಗಡೆ ಎಲ್ಲೂ ಕಸದ ಬುಟ್ಟಿ ಬಿಟ್ಟು ಬೇರೆ ಕಡೆ ಕಸ ಹಾಕಿಲ್ಲ!

ಇದನ್ನು ಓದಿದ ಮೇಲೆ ನೀವೂ ಹೊರಗಡೆ ಕಸ ಹಾಕಲ್ಲ ಅಂತ ತೀರ್ಮಾನಿಸಿದರೆ ನಾ ಬರೆದದ್ದು ಸಾರ್ಥಕ :)

~ ~ To view all the posts click on the Home Menu ~~

Monday 21 May 2012

ಪುರುಳೆ ಹಕ್ಕಿ !



ನನಗೆ ಈ ಕಥೆಯ ಮೂಲ ಯಾವುದು ಅಂತ ಗೊತ್ತಿಲ್ಲ. ನಾನು ಕೇಳಿದ್ದು ಮಾತ್ರ ೧೬ - ೧೭ ವರ್ಷದವನಾಗಿದ್ದಾಗ ನನ್ನ ಸೋದರಮಾವನಿಂದ. ಅದೂ ಅವರ ಮಗ ಸಣ್ಣವನಿದ್ದಾಗ ನಿದ್ದೆ ಮಾಡಿಸಲು ಹೇಳುವಾಗ ಕದ್ದು ಕೇಳಿಸಿಕೊಂಡಿದ್ದು !
ಇದರ ಸಾರಾಂಶ, ಸಂದೇಶ ನಿಮ್ಮ ಕಲ್ಪನೆಗೆ ಬಿಟ್ಟಿದ್ದು. ಇಲ್ಲಿಂದ ಮುಂದೆ ಕಥೆ, ನಾನು ಕೇಳಿಸಿಕೊಂಡಂತೆ, ನನಗೆ ನೆನಪಿದ್ದಂತೆ, ಅದರದೇ ಆದ ಧಾಟಿಯಲ್ಲಿ !

~~ ಪುರುಳೆ ಹಕ್ಕಿ ~~

ಒಂದು ದೊಡ್ಡ ಕಾಡಲ್ಲಿ ಒಂದು ದೊಡ್ಡ ಮರ. ಅದರ ಮೇಲೆ ಒಂದು ಹಕ್ಕಿ ಗೂಡು ಕಟ್ಟಿಕೊಂಡಿತ್ತಂತೆ. ಆ ಹಕ್ಕಿ ಹೆಸರು  ಪುರುಳೆ  ಹಕ್ಕಿ ಅಂತ. ಒಂದು ರಾತ್ರಿ ಜೋರು ಮಳೆ ಬಂದು ಗೂಡು ನೆಲಕ್ಕೆ ಬಿದ್ದು ಬಿಡ್ತಂತೆ. ಅದರ ಮೇಲೆ ಗೂಡು ಇದ್ದ ಮರಾನೂ ಬಿತ್ತಂತೆ.  ಪುರುಳೆ  ಹಕ್ಕಿ ಮರ ಎತ್ತೋಕೆ ನೋಡ್ತಂತೆ. ಆದ್ರೆ ಗೂಡಿನ ಮೇಲೆ ಬಿದ್ದ ಮರ ಎತ್ತೋಕೆ ಆಗ್ಲೇ ಇಲ್ಲ ಅದಕ್ಕೆ.  ಪುರುಳೆ ಹಕ್ಕಿ ತುಂಬಾ ಸಣ್ಣಕ್ಕೆ ಇರುತ್ತೆ ಅಲ್ವ? ಅದಕ್ಕೆ ಆ ದೊಡ್ಡ ಮರ ಹೇಗ್ ಎತ್ತೋಕೆ ಆಗತ್ತೆ ಅಲ್ವ?

ಪುರುಳೆ ಹಕ್ಕಿ ಯಾರ್ ಹತ್ರ ಆದರೂ ಸಹಾಯ ಕೇಳೋಣ ಅಂತ ಸೀದಾ ನರಿ ಮನೆಗೆ ಹೋಯ್ತಂತೆ.
ನರಿ : "ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?" ಅಂತಂತೆ.
ಪುರುಳೆ : "ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಒಂಚೂರು ಮರ ಎತ್ತಿ ಕೊಡ್ತೀಯ?" ಅಂತಂತೆ.
ಅದಕ್ಕೆ ನರಿ : "ನಾನ್ ಮರ ಎತ್ತಲ್ಲ ಹೋಗ್" ಅಂತಂತೆ.

ಈ ನರಿಗೆ ಮಾಡ್ಸ್ತೀನಿ ಅಂತ ಪುರುಳೆ ಹಕ್ಕಿ ಸೀದಾ ನಾಯಿ ಮನೆಗೆ ಹೋಯ್ತಂತೆ.
ನಾಯಿ : "ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?" ಅಂತಂತೆ.
ಪುರುಳೆ: "ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ. ನೀನು ಹೋಗಿ ನರಿಗೆ ಕಚ್ತೀಯ?" ಅಂತಂತೆ.
ಅದಕ್ಕೆ ನಾಯಿ : "ನಾನ್ ಕಚ್ಚಲ್ಲಪ್ಪ. " ಅಂತಂತೆ.

ನಾಯಿಗೆ ಬುದ್ಧಿ ಕಲ್ಸ್ತೀನಿ ಅಂತ ಪುರುಳೆ ಹಕ್ಕಿ ಸೀದಾ ದೊಣ್ಣೆ ಮನೆಗೆ ಹೋಯ್ತಂತೆ.
ದೊಣ್ಣೆ : "ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?" ಅಂತಂತೆ.
ಪುರುಳೆ : "ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ. ನೀನು ಆ ನಾಯಿಗೆ ಹೊಡೀತೀಯ?" ಅಂತಂತೆ.
ಅದಕ್ಕೆ ದೊಣ್ಣೆ : "ಹೋಗ್ ಹೋಗ್, ನಾನ್ ಹೊಡ್ಯಲ್ಲ. " ಅಂತಂತೆ.

ದೊಣ್ಣೆಗೂ ಬುದ್ಧಿ ಕಲ್ಸ್ತೀನಿ ಅಂತ ಪುರುಳೆ ಹಕ್ಕಿ ಸೀದಾ ಬೆಂಕಿ ಮನೆಗೆ ಹೋಯ್ತಂತೆ.
ಬೆಂಕಿ : "ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?" ಅಂತಂತೆ.
ಪುರುಳೆ : "ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ. ನೀನು ಆ ದೊಣ್ಣೆ ಸುಡ್ತೀಯ?" ಅಂತಂತೆ.
ಅದಕ್ಕೆ ಬೆಂಕಿ : "ಈ ರಾತ್ರಿಲಿ? ನಾನ್ ಸುಡಲ್ಲ, ನಂಗ್ ಯಾಕ್ ಬೇಕು. " ಅಂತಂತೆ.

ಈ ಬೆಂಕಿನೂ ಬಿಡಬಾರದು ಅಂತ ಪುರುಳೆ ಹಕ್ಕಿ ಸೀದಾ ನೀರಿನ ಮನೆಗೆ ಹೋಯ್ತಂತೆ.
ನೀರು : "ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?" ಅಂತಂತೆ.
ಪುರುಳೆ : "ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ, ದೊಣ್ಣೆ ಸುಡೋಲ್ವಂತೆ ಬೆಂಕಿ. ನೀನು ಬೆಂಕಿ ನಂದಿಸ್ತೀಯ?" ಅಂತಂತೆ.
ಅದಕ್ಕೆ ನೀರು : "ನಂಗೆ ಬೇರೆ ಕೆಲಸ ಇದೆ, ನಂಗಾಗಲ್ಲ. " ಅಂತಂತೆ.

ಅಲ್ಲಿಂದ ಸೀದಾ ಪುರುಳೆ ಹಕ್ಕಿ ಎತ್ತಿನ ಮನೆಗೆ
 ಹೋಯ್ತಂತೆ.
ಎತ್ತು : "ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?" ಅಂತಂತೆ.
ಪುರುಳೆ : "ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ, ದೊಣ್ಣೆ ಸುಡೋಲ್ವಂತೆ ಬೆಂಕಿ, ಬೆಂಕಿ ನಂದಿಸೋಲ್ವಂತೆ ನೀರು. ನೀನು ಆ ನೀರೆಲ್ಲ ಕುಡ್ದು ಬಿಡ್ತೀಯ? " ಅಂತಂತೆ.
ಅದಕ್ಕೆ ಎತ್ತು : "ನನ್ನ ಹೊಟ್ಟೆ ತುಂಬಿ ಹೋಗಿದೆ. ನಾನ್ ಕುಡ್ಯಲ್ಲ ಹೋಗ್" ಅಂತಂತೆ.

ಸಿಟ್ಟುಕೊಂಡು ಪುರುಳೆ ಹಕ್ಕಿ ಸೀದಾ 
ಹಗ್ಗದ ಮನೆಗೆ ಹೋಯ್ತಂತೆ.
ಹಗ್ಗ : "ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?" ಅಂತಂತೆ.
ಪುರುಳೆ : "ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ, ದೊಣ್ಣೆ ಸುಡೋಲ್ವಂತೆ ಬೆಂಕಿ, ಬೆಂಕಿ ನಂದಿಸೋಲ್ವಂತೆ ನೀರು, ನೀರು ಕುಡಿಯೋಲ್ವಂತೆ ಎತ್ತು. ನೀನು ಆ ಎತ್ತನ್ನ ಕಟ್ಟಿ ಹಾಕ್ತೀಯ? " ಅಂತಂತೆ.
ಅದಕ್ಕೆ ಹಗ್ಗ : "ನಂಗೆ ಜೋರು ನಿದ್ದೆ ಬರ್ತಿದೆ. ನಾನ್ ಕಟ್ಟಲ್ಲ" ಅಂತಂತೆ.

ಹಿಂಗೆ ಬಿಟ್ರೆ ಆಗಲ್ಲ ಅಂತ ಪುರುಳೆ ಹಕ್ಕಿ ಸೀದಾ ಇಲಿ ಮನೆ
ಗೆ ಹೋಯ್ತಂತೆ.
ಇಲಿ : "ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?" ಅಂತಂತೆ.
ಪುರುಳೆ : "ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ, ದೊಣ್ಣೆ ಸುಡೋಲ್ವಂತೆ ಬೆಂಕಿ, ಬೆಂಕಿ ನಂದಿಸೋಲ್ವಂತೆ ನೀರು, ನೀರು ಕುಡಿಯೋಲ್ವಂತೆ ಎತ್ತು, ಎತ್ತು ಕಟ್ಟೋಲ್ವಂತೆ ಹಗ್ಗ. ನೀನು ಹಗ್ಗಾನ ತುಂಡು ಮಾಡ್ತೀಯ? " ಅಂತಂತೆ.
ಅದಕ್ಕೆ ಇಲಿ : "ನಂಗ್ ಪುರಸೊತ್ತಿಲ್ಲ ಹೋಗಾಚೆ" ಅಂತಂತೆ.

ಜೋರು ಸಿಟ್ಟು ಬಂದು ಪುರುಳೆ ಹಕ್ಕಿ ಸೀದಾ ಬೆಕ್ಕಿನ ಮನೆಗೆ ಹೋಯ್ತಂತೆ.
ಬೆಕ್ಕು : "ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?" ಅಂತಂತೆ.
ಪುರುಳೆ : "ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ, ದೊಣ್ಣೆ ಸುಡೋಲ್ವಂತೆ ಬೆಂಕಿ, ಬೆಂಕಿ ನಂದಿಸೋಲ್ವಂತೆ ನೀರು, ನೀರು ಕುಡಿಯೋಲ್ವಂತೆ ಎತ್ತು, ಎತ್ತು ಕಟ್ಟೋಲ್ವಂತೆ ಹಗ್ಗ, ಹಗ್ಗ ತುಂಡು ಮಾಡೋಲ್ವಂತೆ ಇಲಿ. ನೀನು ಆ ಇಲೀನ ಹಿಡಿತಿಯ? " ಅಂತಂತೆ.
ಅದಕ್ಕೆ ಬೆಕ್ಕು : ನನಗು ಇದೆ ಬೇಕಾಗಿತ್ತು ಅನ್ಕೊಂಡು. "ಇಲಿ ಹಿಡಿತೀನಿ ಆದ್ರೆ ನಂಗೆ ಒಂದು ಚೊಂಬು ಪೂರ್ತಿ ಹಾಲು ತಂದುಕೊಡು" ಅಂತಂತೆ.

ಸರಿ ಅಂತ ಪುರುಳೆ ಹಕ್ಕಿ ಸೀದಾ ದನದ ಮನೆಗೆ ಹೋಯ್ತಂತೆ.
ದನ : "ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ ?" ಅಂತಂತೆ.
ಪುರುಳೆ : "ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ, ದೊಣ್ಣೆ ಸುಡೋಲ್ವಂತೆ ಬೆಂಕಿ, ಬೆಂಕಿ ನಂದಿಸೋಲ್ವಂತೆ ನೀರು, ನೀರು ಕುಡಿಯೋಲ್ವಂತೆ ಎತ್ತು, ಎತ್ತು ಕಟ್ಟೋಲ್ವಂತೆ ಹಗ್ಗ, ಹಗ್ಗ ತುಂಡು ಮಾಡೋಲ್ವಂತೆ ಇಲಿ, ಇಲಿ ಹಿಡಿಯುತ್ತಂತೆ ಬೆಕ್ಕು. ಅದಕ್ಕೆ ಒಂದು ಚೊಂಬು ಹಾಲು ಬೇಕಂತೆ ಕೊಡ್ತೀಯ?". ಅಂತಂತೆ.
ಅದಕ್ಕೆ ದನ : "ಹಾಲು ಬೇಕಾದ್ರೆ ಕೊಡ್ತೀನಿ, ಆದರೆ ನಂಗೆ ಜೋರು ಹಸಿವಾಗ್ತಾ ಇದೆ. ನಂಗೆ ಹುಲ್ಲು ತಂದು ಕೊಡ್ತೀಯ?" ಅಂತಂತೆ.

ಪುರುಳೆ : "ಹೋ! ಅದಕ್ಕೇನಂತೆ? ಈಗಲೇ ತಂದು ಕೊಡ್ತೀನಿ". ಅಂತ ಕತ್ತಿ ತಗೊಂಡು ಹೋಗಿ ಒಂದು ಕಟ್ಟು ಹುಲ್ಲು ತಂದು ದನಕ್ಕೆ ಕೊಡ್ತಂತೆ.
ದನ ಆ ಹುಲ್ಲೆಲ್ಲ ತಿಂದು ಪುರುಳೆ ಹಕ್ಕಿಗೆ "ನೀನು ಹಾಲು ಕರ್ಕೋ" ಅಂತಂತೆ.
ಪುರುಳೆ ಹಕ್ಕಿ ಒಂದು ಚೊಂಬು ಪೂರ್ತಿ ಹಾಲು ತಗೊಂಡು ಹೋಗಿ ಬೆಕ್ಕಿಗೆ ಕೊಡ್ತಂತೆ.
ಬೆಕ್ಕು ಹಾಲನ್ನ ಗಟ ಗಟ ಕುಡಿದು, ಇಲೀನ ಹಿಡಿಯೋಕೆ ಅಂತ ಹೋಯ್ತಂತೆ.
ಇಲಿ : "ಅಯ್ಯೋ! ಈ ಬೆಕ್ಕು ನನ್ನ ತಿಂದು ಬಿಡತ್ತೆ" ಅಂತ ಕೂಗ್ತಾ ಸೀದಾ ಹಗ್ಗ ತುಂಡು ಮಾಡೋಕೆ ಶುರು ಮಾಡ್ತಂತೆ.
ಹಗ್ಗ : "ಇಲಿ ನನ್ನ ತುಂಡು ತುಂಡು ಮಾಡಿ ಬಿಡುತ್ತೆ" ಅಂತ, ಸೀದಾ ಹೋಗಿ ಎತ್ತನ್ನ ಕಟ್ಟೋಕೆ ನೋಡ್ತಂತೆ.
ಎತ್ತು : "ಹಗ್ಗ ನನ್ನ ಕಟ್ಟಿ ಹಾಕಿದ್ರೆ, ಮತ್ತೆ ನಾನು ಎಲ್ಲೂ ಹೋಗೋಕೆ ಆಗಲ್ಲ" ಅಂತ ಓಡಿ ಹೋಗಿ ನೀರು ಕುಡಿಯೋಕೆ ಶುರು ಮಾಡ್ತಂತೆ.
ನೀರು : "ಈ ಎತ್ತು ನನ್ನ ಪೂರ್ತಿ ಕುಡಿದು ಬಿಟ್ರೆ" ಅಂತ ಹೆದರಿಕೆ ಆಗಿ ಸೀದಾ ಬೆಂಕಿನ ನಂದಿಸೋಕೆ ಹೋಯ್ತಂತೆ.
ಬೆಂಕಿ : "ನೀರು ನನ್ನ ನಂದಿಸಿ ಬಿಟ್ರೆ ಮತ್ತೆ ನಾನು ಇರೋದೇ ಇಲ್ಲ" ಅಂತ ದೊಣ್ಣೆ ಸುಡಕ್ಕೆ ಶುರು ಮಾಡ್ತಂತೆ.
ದೊಣ್ಣೆ : "ಅಯ್ಯಯ್ಯೋ! ಬೆಂಕಿ. ನನ್ನ ಸುಡಬೇಡ" ಅಂತ ನಾಯಿಗೆ ಹೊಡೆಯೋಕೆ ಶುರು ಮಾಡ್ತಂತೆ.
ಮಲ್ಕೊಂಡಿದ್ದ ನಾಯಿ ಇದ್ದಕ್ಕಿದ್ದಂಗೆ ಹೊಡೆತ ಬಿದ್ದಿದ್ದು ನೋಡಿ "ಕೊಂಯ್ ಕೊಂಯ್" ಅಂತ ಓಡಿ ಹೋಗಿ ನರಿಗೆ ಕಚ್ತಂತೆ.
ನರಿ  : "ಪುರುಳೆ ಹಕ್ಕಿ, ನಾಯಿಗೆ ಕಚ್ಬೇಡ ಅಂತ ಹೇಳು! ಮರ ಎತ್ತಿ ಕೊಡ್ತೀನಿ" ಅಂತ ನಾಯಿಗಿಂತ ಜೋರಾಗಿ ಓಡಿ ಹೋಗಿ ಗೂಡಿನ ಮೇಲೆ ಬಿದ್ದಿದ್ದ ಮರ ಎತ್ತಿ, ಗೂಡೆಲ್ಲ ಸರಿ ಮಾಡಿ, ಇನ್ನೊಂದು ಮರದ ಮೇಲೆ ಗೂಡನ್ನ ಇಟ್ಟು. ಇನ್ನು ಯಾವತ್ತೂ ಸಹಾಯ ಕೇಳಿದವರಿಗೆ ಮಾಡದೆ ಇರಲ್ಲ ಅಂತ ಸೀದಾ ಮನೆಗೆ ಹೋಯ್ತಂತೆ.

ಆಮೇಲಿಂದ ಪುರುಳೆ ಹಕ್ಕಿ ತನ್ನ ಮಕ್ಕಳ ಜೊತೆ ಸುಖ್ವಾಗ್ ಇತ್ತಂತೆ.


~ ~ To view all the posts click on the Home Menu ~~

Monday 14 May 2012

ಮೊದಲ ಮಳೆ



ದ್ವೀಪದಲ್ಲೊಂದು ಮರ
ಮರದ ಮೇಲೊಂದು ಹಕ್ಕಿ
ಹಕ್ಕಿಯ ಬಾಯಲ್ಲಿ ಗೆದ್ದಲು

ಗೂಡಿನಲ್ಲುಳಿದ ಗೆದ್ದಳುಗಳಿಗೆ ತಾವು ಉಳಿದೆವೆಂಬ ಖುಷಿ
ಹಕ್ಕಿಗೆ ತನಗೆ ಆಹಾರ ಸಿಕ್ಕಿತೆಂಬ ಖುಷಿ
ಮರಕ್ಕೆ ಹಕ್ಕಿ, ಗೆದ್ದಲು ಸೇರಿ ತನ್ನ ತಿಂದಾವೆಂಬ ಭಯ

ಇದ್ದಕ್ಕಿದ್ದಂತೆ ಪಟಪಟನೆ ಗೆದ್ದಲು ಗೂಡಿನ ಮೇಲೆ ಬಿದ್ದ ಮಳೆಹನಿ

ಗೆದ್ದಲುಗಳಿಗೆ ತಮ್ಮ ಗೂಡು ಹಾಳಾದೀತೆಂಬ ಭಯ
ಹಕ್ಕಿಗೆ ತನ್ನ ಮಕ್ಕಳು ಒದ್ದೆ ಆದಾವೆಂಬ ಭಯ
ಮರಕ್ಕೆ ತಾನು ಸ್ವತಂತ್ರನಾಗುವೆನೆಂಬ ಖುಷಿ
ಮೊದಲ ಮಳೆಯ ಖುಷಿ

~ ~ To view all the posts click on the Home Menu ~~

Thursday 10 May 2012

ಬಾಲ್ಯ ಸ್ನೇಹಿತ

ನಾವೇನೂ ಮೂರು ಹೊತ್ತೂ ಒಟ್ಟಿಗೆ ಇರುತ್ತಾ ಇದ್ದ ಸ್ನೇಹಿತರಲ್ಲ. ಆದರೆ ಯಾವ ಹೊತ್ತಲ್ಲಿ ಸಿಕ್ಕಿದರೂ ಜಗಳ ಆಡಿದವರಲ್ಲ. ಕ್ರಿಕೆಟ್ ಅನ್ನೋ ಆಟವನ್ನ ಹೆಚ್ಚು ಕಡಿಮೆ ದಿನಾ ಆಡ್ತಾ ಇದ್ವಿ ಅಲ್ವನೋ? ನನಗೂ ನಿನಗೂ ವಯಸ್ಸಲ್ಲಿ ಬರೀ ಮೂರ್ನಾಲ್ಕು ತಿಂಗಳುಗಳ ಅಂತರವಿದ್ದಿದ್ದರಿಂದಲೋ ಏನೋ  ನಮ್ಮ ಯೋಚನೆಗಳು ಒಂದೇ ದಿಕ್ಕಿನಲ್ಲಿರುತ್ತಿದ್ದವು. ನಿನಗೂ ಗೊತ್ತು, ನಮಗಿಂತ ಮೊದಲು ನಿನ್ನ ಮತ್ತು ನನ್ನ ಅಪ್ಪ ಸ್ನೇಹಿತರು. ಯಾವಾಗಲೋ ಒಮ್ಮೆ ನಿಮ್ಮ ಅಪ್ಪ ನಮ್ಮ ಅಪ್ಪನ ಬಳಿ ಹೇಳಿದ ನೆನಪು "ನಮ್ಮಿಬ್ಬರ ಥರಾನೆ ನಮ್ಮ ಮಕ್ಕಳೂ ಸ್ನೇಹಿತರು ನೋಡು" ಅಂತ. ಅದೇ ಥರ ಇದ್ವಿ ತಾನೆ ನಾವು? ಈಗ ಹೇಳ್ದೆ ಕೇಳ್ದೆ ಹಿಂಗೆ ಮಾಡಿ ಬಿಟ್ರೆ? 

ಅವೆಲ್ಲ ಇರಲಿ, ಇಷ್ಟು ಬೇಗ ಹೋಗೋ ಆತುರ ಏನಿತ್ತು ನಿಂಗೆ? ನಿಮ್ಮ ಮನೆಯವರ ಸ್ಥಿತಿಯನ್ನ ನಮ್ಮ ಅಮ್ಮ, ಅಪ್ಪ ಹೇಳುತ್ತಿದ್ದಾಗ, ಬಂದು ನಿನ್ನ ಕೆನ್ನೆ ಮೇಲೆ ನಾಲ್ಕು ಬಾರಿಸಿ, ಕೈ ಹಿಡಿದು ಎಳ್ಕೊಂಡು ಬರೋಣ ಅನಿಸುತಿತ್ತು. ಕಾಲಿಗೆ ಬಿದ್ದು "ತಿರುಗಿ ಬಾ" ಅಂತ ಕೇಳೋಣ ಅನಿಸುತಿತ್ತು. ಆದರೆ ನೀನು ಬಹಳ ಬುದ್ಧಿವಂತ. ನನ್ನ ಕೈಗೆ ಸಿಗಲೇ ಇಲ್ಲ.
ನಿನ್ನ ಆ ನಗು, ಬೇರೆಯವರನ್ನು ಛೇಡಿಸುತ್ತಿದ್ದ ಆ ಮುಖ, ಎತ್ತರದ ಕಡ್ಡಿ ದೇಹ, ಈಗಲೂ ಈ ಕಣ್ಣ ಮುಂದಿದೆ, ಯಾವಾಗಲೂ ಇರುತ್ತೆ.

ನೀನು ಇಲ್ಲ ಅನ್ನೋದನ್ನ ನಾನಂತೂ ನಂಬೋಲ್ಲ. ಇನ್ನು ಮೇಲೆ ನಿಮ್ಮ ಮನೆಯವರಿಗೆ ಯಾವ ಕಷ್ಟಾನೂ ಬರದೆ ಇರೋ ಥರ ನೋಡ್ಕೋ. " ನಾನು ಅವರ ಕಣ್ಣಿಗೆ ಕಾಣೋದೇ ಇಲ್ಲ ", " ನಂಗೆ ಅವರನ್ನ ಮಾತಾಡ್ಸೋಕೆ ಆಗಲ್ಲ " ಅಂತೆಲ್ಲ ಕಾರಣ ಕೊಟ್ರೆ ಖಂಡಿತ ಬಂದು ನಿನ್ನ ಕೈ ಮುರೀತೀನಿ.

ಬಾಲ್ಯ ಸ್ನೇಹಿತನ ಅಗಲಿಕೆ ಸಹಿಸೋದು ಇಷ್ಟೊಂದು ಕಷ್ಟ ಅಂತ ಗೊತ್ತಿರಲಿಲ್ಲ. ಇದಿಷ್ಟೂ ನೀನು ಓದಿದೀಯ ಅನ್ನೋದು ನನಗೂ ಗೊತ್ತು ನಿನಗೂ ಗೊತ್ತು. ಆದಷ್ಟು ಬೇಗ ನಮ್ಮೆಲ್ಲರ ಕಣ್ಣಿಗೆ ಕಾಣೋ ರೂಪದಲ್ಲಿ ಮತ್ತೊಮ್ಮೆ ಬಾ. ಕಾಯ್ತಾ ಇರ್ತೀವಿ. 




~ ~ To view all the posts click on the Home Menu ~~

Tuesday 8 May 2012

The Song :ನಿನ್ನಯ ನನ್ನಯ ಕಲಹ




The lines in my vision for the song "Ellello Oduva Manase" from the movie "Sidlingu" (Kannada).

We are presenting the brand new song As Promised in our earlier song ! Let us know what you expect in the future ! Looking forward to ur feedback Thanks ♥ All.


ನಿನ್ನಯ  ನನ್ನಯ  ಕಲಹ , ಓ... ಬೇಡವೇ ಬೇಡ  ಪುನಃ 
ಇಲ್ಲಿಯೇ ಇರುವ ಮನಸಾ ಹಾ... ಕ್ಷಮಿಸು ಯಾಕೆ ವಿರಸ 
ವ್ಯಸನವೆಲ್ಲ  ಗುಡಿಸಿ, ನಲಿವನು ಕಾಗುಣಿಸಿ
ದೂರದಿಂದಲೇನೆ ಬಯಸೂ ಸನಿಹ  ಸುಮ್ಮನೇ 

ನನ್ನಾ ಎಲ್ಲ ತರ್ಕವಾ ನೀನೆಯೇ ಸುಳ್ಳನು ಮಾಡಿದೆ
ನನ್ನಾ ಎಲ್ಲ  ಯೋಚನೆ ನಿನ್ನಯ ಮೇಲೆಯೇ ನಿಂತಿದೇ
ಕಣ್ಣಿನ ಒಳಗಣ್ಣಿನ ಹೃದಯಕೆ ನಿನದೇ ಧ್ಯಾನ 
ಮೂಡಣ ಈ ಪಡುವಣ ನೀನಿಲ್ಲದೇನೆ ಗೌಣ
ನಿನ್ನ  ಕನಸಿನಲ್ಲೀ ಕರೆಸೂ ನನ್ನಾ ಸುಮ್ಮನೇ
||ನಿನ್ನಯ  ನನ್ನಯ  ಕಲಹ||

ಏನೋ ಇಲ್ಲ ಎನ್ನುವ ನಿನ್ನಯಾ ಭಾವನೆ ಮಿಥ್ಯವೂ 
ನಲಿವಿನ ಸಂದರ್ಭದೀ ಅಳುವುದೂ ಹಾಸ್ಯವೇ ಸತ್ಯವೂ 
ಸ್ವಾರ್ಥದ ನಿಸ್ವಾರ್ಥದ ಬಗೆ ಬಗೇ ಗುಣವೇ ಅಂದ 
ನೀನಿರೆ ಬಲು ಚಂದದ ಚಂದ್ರ ಕೂಡ ಮಂದ 
ಬೆಳಕು ಇಲ್ಲದೇನೇ ನನ್ನ ಓದು ಸುಮ್ಮನೇ 
||ನಿನ್ನಯ  ನನ್ನಯ  ಕಲಹ||  


~ ~ To view all the posts click on the Home Menu ~~


Sunday 6 May 2012

Inspirational Quotes !

Latest :  Looking at your 'Aim' will get you nothing, you have to throw an arrow towards it!
......................................................................................................................................

Share the happiness, leave your sorrow!
Live today, forget tomorrow
......................................................................................................................................

You might be facing 1991 problems, but at the end of the day, only thing that matters is
"what you have learned and achieved from those problems" :)
......................................................................................................................................

Talking about problem, doesn't solve the problem!
Working towards the solution does :)
......................................................................................................................................

You can learn anything, anytime !
But In the end you should have to do what you love to do :)
......................................................................................................................................

Everybody has their own life, Some people makes it colorful :)
......................................................................................................................................

'Hope' can be so small but it has the ability to fill up our whole life with positive thoughts.
......................................................................................................................................

Sometimes You have to make the things happen rather waiting for someone.
You may be alone at the time but your feeling about YOU and about rest of the world, after that work will be just more than awesome !

Taking the right decisions at the right time is what you have to do.
......................................................................................................................................

You will always have a 'hundred' stupid things to share with your friends ;)
And you always have to act as if you are listening to those 'hundred and one' stupid things which your friends sharing with you o_O
......................................................................................................................................

Nothing can stop you when being yourself inspires you !
......................................................................................................................................

Ignorance! The thing which can take you to the deepest hell if u take it negatively & to the highest peak if u take it it positively :)
......................................................................................................................................

When you start to do something new, the first thing you have to face is Ignorance of people! Success comes after few more steps of it :)
......................................................................................................................................

Life is like a fire!
It will burn only if you don't know how to deal with it.
......................................................................................................................................

It is the Oldest memory which can make you happiest person in the world :)
Recall your's - Be Happy :)
......................................................................................................................................

'Luck' is like Stars and Extra Life in Super Mario or Temple Run game.

To get that you have to run towards your destiny !
......................................................................................................................................

'Special' is a feeling which comes when you are thinking about something which you never thought in your whole years :) !
......................................................................................................................................

To Get the New Thing, You have to go in a New Way :)
......................................................................................................................................
If you got control over your Depressions and Excitements, you can handle Anything ; Yes 'ANYTHING' which comes in your way !
......................................................................................................................................
When you are getting ignored, You have more chances to surprise people by proving that they are wrong :)
......................................................................................................................................
Either you dance, sing a song, play guitar, take a picture, paint something, write a poem, play sports or do whatever you want; People think you are awesome only when they can't understand what you are doing or when they really can't do what exactly you are doing.
......................................................................................................................................
The things someone imagined before is our knowledge now. So if you imagine today, it could be the knowledge of someone else tomorrow !
......................................................................................................................................
Why to Bother when you can smile at the problem?
Why to run when you can Kick the Problem?
Why to Die when you can Fight with the Problem?
Why to Cry when you can Laugh at the Problem?
Why to fall when you can Jump Above the Problem?
Why to make Friendship with it when you can Kill the Problem?

Be with your Problem.
Live with your Problem.
But make sure before going to sleep you solve your Problem !
......................................................................................................................................
Is every one Ignoring you..?? Just IGNORE the Ignorance of them and do what you doing...
......................................................................................................................................
The person you avoided many times will never try to contact you unless you make him/her believe that the avoidance was not by mean...
......................................................................................................................................
If you are feeling Uncomfortable with some one, avoid them from first itself..
Because if you are going to avoid them after creating comfortable environment with them, it'll surely hurts both of you people..
......................................................................................................................................
Its just waste of time by feeling on what others thinking about you..
......................................................................................................................................
If GOOD things happens, think that is because of OTHERS -- Your feeling on them will be GOOD always !!
If some mistake happens, think that is because of YOU -- Same mistake never happens by your side !!
......................................................................................................................................
Don't think about what they DID or How they BEHAVE..
But think about what YOU have to DO and How YOU have to BEHAVE..
......................................................................................................................................
The day you THINK you are doing a good Job,
that Good Job starts losing it's value in your mind !
......................................................................................................................................
Just Belive !
Each and Every Person who will come / came in your life are Important.
You will never hate anyone!

~ ~ To view all the posts click on the Home Menu ~~

Saturday 5 May 2012

My only SWEETEST HEART

Dedicated to my only SWEETEST HEART,my buddy "Pakru".

I LOVE DOG :)
Because he is not like humans !
He lives his life so happily.

BITES the 1 who's irritating him with no mercy.
CRIES when he's alone.
Shows his LOVE by licking you.
SHOUTS if he don't like something.
RUNS if he want to play.
Neva Bothers what others saying.
Totally he ENJOYS his own life in his own style
& he always do wat he want to do. 

I wanna be a dog in my next life ♥ !


~ ~ To view all the posts click on the Home Menu ~~

Friday 4 May 2012

ಚಿತ್ರಾನ್ನ ? ಬರ್ಗರ್ ?


ಹೌದು, ಹೌದು, ಹೌದು.
ಇಲ್ಲ ಇಲ್ಲ ಇಲ್ಲ .
ಇದ್ರೂ ಇರಬಹುದೇನೋ!
ಸುಮ್ಮನೆ ಇದೇ ಥರ ಗೊಂದಲದಲ್ಲಿ ಇಷ್ಟು ದಿನ ಕಳೆದೆನಲ್ಲ ಅಂತ ಬೇಜಾರೇನೂ ಇಲ್ಲ . ಆ ಥರ ಇದ್ದಿದ್ದಕ್ಕೆ ಇನ್ನು ಮೇಲೆ ಆ ಥರ ಇರಬಾರದು ಅಂತ ಗೊತ್ತಾಗಿದ್ದು ತಾನೆ ?
ಅವೆಲ್ಲಾ ಇರಲಿ ಈಗ ವಿಷಯಕ್ಕೆ ಬರೋಣ !

ಜೀವನವನ್ನು ಯಾವುದಕ್ಕೆ ಹೋಲಿಸಬಹುದು ?!
ಹಿಂದಿನ ಕಾಲದ ಜ್ಞಾನಿಗಳು ಜೀವನದ ಕಷ್ಟ ಸುಖಗಳನ್ನು ಹಗಲು/ರಾತ್ರಿಗೋ, ಹರಿಯುವ ನದಿಗೋ ಹೋಲಿಸಿದ್ದಾರೆ. ನಾನೂ ಒಬ್ಬ ಅಲ್ಪಜ್ಞಾನಿ ಅಥವಾ ಅಜ್ಞಾನಿ. ನನ್ನ ಪ್ರಕಾರ ಜೀವನ ಅಂದರೆ ನಾವು ತಿನ್ನೋ ಊಟದ ಥರ .
ಈ ತಿನ್ನುವುದರಲ್ಲೂ ಸಸ್ಯಾಹಾರ ,ಮಾಂಸಾಹಾರ , ಬೇಯಿಸಿದ್ದು, ಹಸಿ ತರಕಾರಿ ಅಂತೆಲ್ಲ ಇದ್ದರೂ ನನ್ನ ಪ್ರಕಾರ ಇರೋದು ಎರಡೇ ವಿಧ .
೧) ಇಷ್ಟಪಟ್ಟು ತಿನ್ನುವುದು.
೨) ಕಷ್ಟಪಟ್ಟು ತಿನ್ನುವುದು.

ನಾವೇನೋ ಮಾಡಬೇಕು ಅಂದುಕೊಂಡಿದ್ದರೆ ಅದನ್ನ ನಾವೇ ತಾನೆ ಮಾಡಬೇಕು? ಸುಮ್ಮನೆ ಡೈನಿಂಗ್ ಟೇಬಲ್ ಮುಂದೆ ಕೂತ್ಕೊಂಡು "ಅಯ್ಯೋ! ದಿನಾ ಬರೀ ಇದೇ ಚಿತ್ರಾನ್ನ" ಅಂತ ಕೊರಗುತ್ತಾ ಇದ್ರೆ ಏನೂ ಪ್ರಯೋಜನವಿಲ್ಲ . ಪಾನಿಪೂರಿನೋ, ಬರ್ಗರ್ ನೋ, ಮಸಾಲೆ ದೋಸೇನೋ ತಿನ್ನಬೇಕು ಅನ್ಸಿದ್ರೆ ನಾವೇ ಅಡಿಗೆ ಮನೆಗೆ ಹೋಗಿ ಅದನ್ನ ಮಾಡೋಕೆ ಪ್ರಯತ್ನಿಸಬಹುದು ತಾನೆ ? ಒಂದೇ ಸಲ ಚೆನ್ನಾಗಿ ಮಾಡೋಕೆ ಬರದೆ ಇದ್ರೂ ಮಾಡ್ತಾ ಮಾಡ್ತಾ ರುಚಿಯಾಗಿ ಮಾಡೋಕೆ ಬರುತ್ತೆ.

ಈಗ ಸಚಿನ್ ತೆಂಡುಲ್ಕರ್ ಮೊನ್ನೆ ಮೊನ್ನೆಯಷ್ಟೇ 100ನೇ  ಶತಕ ಹೊಡೆದರು. ಆದರೆ ಅವರು ಆಡಿರೋ ಪಂದ್ಯಗಳೆಷ್ಟು? 652 (ಏಪ್ರಿಲ್ 19 -2012 )! ಅಂದರೆ ಉಳಿದ ಪಂದ್ಯಗಳಲ್ಲಿ ಅವರು ಶತಕ ಬಾರಿಸಿಲ್ಲ! ಹಂಗಂತ ಅವರಿಗೆ ಕ್ರಿಕೆಟ್ ಆಡೋಕೆ ಬರೋದಿಲ್ಲ ಅನ್ನೋಕಾಗುತ್ತ ? ಈಗ ಅವ್ರು ಸೊನ್ನೆಗೆ ಔಟ್ ಆದ್ರೂ ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಆಡ್ತೀನಿ ಅಂದ್ಕೊಂಡಿದ್ದಕ್ಕೆ 100  ಶತಕ ಹೊಡೆದಿರೋದು!

ಕ್ರಿಕೆಟ್ ಹಂಗಿರಲಿ ಈಗ ಮತ್ತೆ ಊಟದ ವಿಷಯಕ್ಕೆ ಬರೋಣ!
ಒಂದು ಸಲ ಯೋಚನೆ ಮಾಡಿ, ನೀವು ಯಾವ ಥರ ಊಟ ಮಾಡ್ತಾ ಇದ್ದೀರಾ ಅಂತ. ನಿಮ್ಮ ಮುಂದೆ ಕೆಲವು ಆಯ್ಕೆಗಳಿವೆ.
1) ಡೈನಿಂಗ್ ಟೇಬಲ್ ಮುಂದೆ ಕೂತ್ಕೊಂಡು "ಅಯ್ಯೋ! ದಿನಾ ಬರೀ ಇದೇ ಚಿತ್ರಾನ್ನ" ಅಂತ ಕೊರಗುತ್ತಾ ಬೇರೆಯವರು ತಂದು ಕೊಡೋ ಅದೇ "ಚಿತ್ರಾನ್ನ"ವನ್ನೇ ತಿನ್ನುತ್ತಿದ್ದೇನೆ.
2) ಡೈನಿಂಗ್ ಟೇಬಲ್ ಮುಂದೆ ಕೂತ್ಕೊಂಡು "ಹೆಂಗಿದ್ರೂ ಯಾವುದೋ ಒಂದು ಕೊಡ್ತಾರೆ. ಯಾವ್ದಾದ್ರೆ ನನಗೇನು" ಅಂತ ಏನೂ ಸಿಗದೇ/ಕೊಡದೇ ಇದ್ರೂ ಖಾಲಿ ಹೊಟ್ಟೆಯಲ್ಲೇ ಇರ್ತೀನಿ.
3) "ಇಲ್ಲೇ ಇದ್ರೆ ಇದೇ ಚಿತ್ರಾನ್ನ ತಿನ್ನಬೇಕು" ಅಂತ ಹೊರಗೆ ಹೋಗಿ ಅಲ್ಲೇ ಏನೋ ತಿಂತೀನಿ. ಅಕಸ್ಮಾತ್ ದುಡ್ಡು ಖಾಲಿ ಆಯ್ತು ಅಂದ್ರೆ ಮನೆಗೆ ಬಂದು ಅದೇ ಚಿತ್ರಾನ್ನ ತಿಂತೀನಿ ಅಥವಾ ಖಾಲಿ ಹೊಟ್ಟೆಯಲ್ಲೇ ಇರ್ತೀನಿ.
4) "ಯಾರು ದಿನಾ ಇದೇ ಚಿತ್ರಾನ್ನ ತಿಂತಾರೆ" ಅಂತ ಅಡುಗೆಮನೆಗೆ ಹೋಗಿ ಮತ್ತೆ "ಅಯ್ಯೋ! ಬೇರೆ ಎಲ್ಲ ಮಾಡೋದು ಕಷ್ಟ" ಅಂತ ಅದೇ  ಚಿತ್ರಾನ್ನ ಮಾಡ್ಕೊಂಡು ತಿಂತೀನಿ.
5) "ನಾನು ಇವತ್ತು ಚಿತ್ರಾನ್ನ ತಿನ್ನಲ್ಲ" ಅನ್ಕೊಂಡು ಅಡುಗೆಮನೆಗೆ ಹೋಗಿ, ಬೇರೆ ಏನೋ ಒಂದು ಅಡುಗೆ ಮಾಡಿ, ರುಚಿ ನೋಡಿ, "ಥೂ! ನಂಗೆ ಬೇರೆ ಯಾವ್ದೂ ಮಾಡೋಕೆ ಬರೋಲ್ಲ" ಅಂತ ಮಾರನೆ ದಿನದಿಂದ ಮತ್ತದೇ ಚಿತ್ರಾನ್ನ ಮಾಡ್ಕೊಂಡು ತಿಂತೀನಿ.
6) ಮನೆಗೆ ಬರೋ ಮುಂಚೆನೇ ಬೇರೆಯವರ /ಬೇರೆ ಮೂಲದಿಂದ ಬೇರೆ ಬೇರೆ ಥರದ ಅಡುಗೆ ಮಾಡೋದು ಹೇಗೆ ಅಂತ ಕೇಳಿ/ನೋಡಿ ತಿಳ್ಕೊಂಡು, ಅದನ್ನು ಮನೆಯ ಅಡುಗೆಮನೆಯಲ್ಲಿ ತಯಾರಿಸಿ, ಚೆನ್ನಾಗಿರಲಿಲ್ಲ ಅಂದ್ರೆ ಯಾವ ಪದಾರ್ಥ ಕಡಿಮೆ/ಜಾಸ್ತಿ ಆಗಿತ್ತು ಅಂತ ತಿಳ್ಕೊಂಡು, ಮತ್ತೆ ಮತ್ತೆ ಅದನ್ನೇ ಮಾಡಿ "ಸೂಪರ್ ಆಗಿದೆ !" ಅಂತ ಹೇಳ್ತಾ ತಿಂತೀನಿ.

ನಾನು   ಆಗಲೇ ಹೇಳಿದ ಹಾಗೆ ಊಟದಲ್ಲಿ ಹೇಗೆ ಇಷ್ಟಪಟ್ಟು ತಿನ್ನುವುದು, ಕಷ್ಟಪಟ್ಟು ತಿನ್ನುವುದು ಅಂತ ಎರಡು ವಿಧಗಳು ಇವೆಯೋ ಅದೇ ರೀತಿ ನಾವು ಮಾಡೋ ಕೆಲಸದಲ್ಲೂ. ನಾವು ಇಷ್ಟ ಪಟ್ಟು ಮಾಡ್ತಾ ಇದೀವೋ, ಕಷ್ಟ ಪಟ್ಟು ಮಾಡ್ತಾ ಇದೀವೋ ಅನ್ನೋದಷ್ಟೇ ಮುಖ್ಯ .

ನಾನು ಏನು ಹೇಳೋಕೆ ಪ್ರಯತ್ನಿಸುತ್ತಾ ಇದೀನೋ ಅದು ನಿಮಗೆ ಅರ್ಥ ಆಗಿದೆ ಅನ್ಕೋತೀನಿ. ಆಗಿಲ್ಲ ಅಂದ್ರೆ "ಊಟ" ಪದ ಇರೋ ಜಾಗದಲ್ಲಿ "ಕೆಲಸ" ಪದವನ್ನೂ, "ಚಿತ್ರಾನ್ನ" ಪದ ಇರೋ ಜಾಗದಲ್ಲಿ "ಇಷ್ಟ ಇಲ್ಲದೆ ಮಾಡ್ತಾ ಇರೋ ಕೆಲಸ" ಪದವನ್ನೂ ಹಾಕಿ ಮತ್ತೊಮ್ಮೆ ಓದಿ.

ಯಪ್ಪಾ ದೇವ್ರೇ! ನಾನು ಇಷ್ಟು ಕೆಟ್ಟದಾಗಿ ಕೊರಿತೀನಿ ಅಂತ ಈಗಲೇ ಗೊತ್ತಾಗಿದ್ದು.
ಕೊನೆ ಮಾತು:-
ನಿಮಗೆ ಏನೇ ಕಷ್ಟ ಬಂದರೂ ಜಾಡಿಸಿ ಒದ್ದು ಡೈನಿಂಗ್ ಟೇಬಲ್ ಇಂದ ಮೇಲೆ ಏಳಿ, ಅಡುಗೆಮನೆಗೆ ಹೋಗಿ ನಿಮಗೆ ಏನು ಇಷ್ಟಾನೋ ಅದನ್ನು ಮಾಡ್ಕೊಂಡು ತಿನ್ನಿ!
ರುಚಿ  ಹೇಗಿದ್ರೆ ಚೆನ್ನ ಅಂತ ತಿಳ್ಕೊಳೋಕೆ ಬೇಕಾದ್ರೆ ಅಪರೂಪಕ್ಕೊಮ್ಮೆ ಹೋಟೆಲ್ ಕಡೆ ಹೋಗಿ ಬನ್ನಿ.


Photo Courtesy : Google ! 

~ ~ To view all the posts click on the Home Menu ~~