Wednesday 13 June 2012

ಕೊರೆತ !!

ನಾವೆಷ್ಟು ಮೂರ್ಖರು! ಅದೆಷ್ಟು Negative?
ನಮಗೆ ಡ್ಯಾನ್ಸ್ ಮಾಡೋಕೆ ಬರ್ತಿರತ್ತೆ, ಆದ್ರೆ ನಾವು ಯೋಚನೆ ಮಾಡೋದು ನಮಗೆ ಬಂದಿರೋ ಬಿಳಿ ಕೂದಲಿನ ಬಗ್ಗೆ.
ನಮಗೆ ನೂರಾರು ಜನ Friends ಇರ್ತಾರೆ ಆದ್ರೆ ನಾವು ಯೋಚನೆ ಮಾಡೋದು ನಾವು ಉಳಿಸಿಕೊಂಡಿರೋ Subject ಗಳ ಬಗ್ಗೆ.
ನಾವು ಬರೆದಿರೋ Exam ಅಲ್ಲಿ ಚೆನ್ನಾಗೇ Marks ಬಂದಿರತ್ತೆ ಆದ್ರೆ ನಾವು ಯೋಚನೆ ಮಾಡೋದು ಕ್ರಿಕೇಟ್ ಅಲ್ಲಿ First Ball ಗೆ Out ಆಗ್ತೀನಿ ಅಂತ.
ನಮಗೆ ಚೆನ್ನಾಗಿ Painting ಮಾಡೋಕೆ ಬರ್ತಿರತ್ತೆ ಆದ್ರೆ ನಾವು ಯೋಚನೆ ಮಾಡೋದು ನಮಗೆ ಒಳ್ಳೇ ಕೆಲಸ ಸಿಕ್ಕಿಲ್ಲ ಅಂತ.
ನಾವು ಚೆನ್ನಾಗಿ ಅಡುಗೆ ಮಾಡಬಲ್ಲವರಾಗಿರುತ್ತೇವೆ ಆದ್ರೆ ನಾವು ಯೋಚನೆ ಮಾಡೋದು ನಮ್ಮನ್ನು ಯಾರು ಇಷ್ಟ ಪಡ್ತಾ ಇಲ್ವೋ ಅವರ ಬಗ್ಗೆ.
ನಮಗೆ Computer ಬಗ್ಗೆ ಏನೇನೋ ಗೊತ್ತಿರತ್ತೆ ಆದ್ರೆ ನಾವು ಯೋಚನೆ ಮಾಡೋದು ನಾನು ಇಷ್ಟೊಂದು ದಪ್ಪ ಇರಬಾರದಿತ್ತು ಅಂತ.

ನಮಗೆ ಯಾವ ವಿಷಯದ ಬಗ್ಗೆ ಚೆನ್ನಾಗಿ ಗೊತ್ತೋ ಅದರ ಬಗ್ಗೆನೇ ಯೋಚನೆ ಮಾಡೋದಾದ್ರೆ, Positive ಆಗಿ Think ಮಾಡೋದಾದ್ರೆ, ನಮಗೆ ಯಾವ ವಿಷಯ ಗೊತ್ತಿಲ್ಲ ಅನ್ನೋ ವಿಷಯಾನೇ ಮರೆತು ಹೋಗತ್ತೆ !
......................................................................................................................................
ನೀವು ಡಾನ್ಸ್ ಮಾಡಿ, ಹಾಡು ಹೇಳಿ, ಗಿಟಾರ್ ಬಾರಿಸಿ, ಫೋಟೋ ತೆಗೆಯಿರಿ, ಚಿತ್ರ ಬರೆಯಿರಿ, ಕವಿತೆ ಬರೆಯಿರಿ, ಆಟ ಆಡಿ ಅಥವಾ ನಿಮಗೆ ಇಷ್ಟ ಬಂದಿದ್ದು ಏನೇ ಮಾಡಿ; ಜನ ನಿಮ್ಮನ್ನ ಅವರ ಮನಸಲ್ಲೇ ಭೇಷ್ ಅನ್ನೋದು ಅವರಿಗೆ ನೀವು ಏನು ಮಾಡ್ತಿದ್ದೀರ ಅಂತ ಗೊತ್ತಾಗದೇ ಇದ್ದಾಗ ಅಥವಾ ನೀವು ಏನು ಮಾಡ್ತಾ ಇದೀರೋ ಅದನ್ನ ಅವರಿಗೆ ಮಾಡೋಕೆ ಆಗದೆ ಇದ್ದಾಗ.
......................................................................................................................................
ಹಿಂದಿನ ಕೆಲವು ಜನರ ಯೋಚನೆ ಇಂದಿನ ನಮ್ಮ ಜ್ಞಾನ. ಹಾಗಾಗಿ ನೀವು ಈಗ ಯೋಚಿಸಿದರೆ, ಮುಂದೆ ಅದು ಇನ್ನೊಬ್ಬರ ಜ್ಞಾನ ಆಗಬಹುದು !
......................................................................................................................................
ಏಕೆ ಯೋಚನೆ? ನಿಮ್ಮ ಸಮಸ್ಯೆಯನ್ನು ನೋಡಿ ಮುಗುಳುನಗಲು ಸಾಧ್ಯವಿರುವಾಗ.
ಏಕೆ ಓಟ? ನಿಮ್ಮ ಸಮಸ್ಯೆಯನ್ನು ಒದೆಯಲು ಸಾಧ್ಯವಿರುವಾಗ.
ಏಕೆ ಸಾವು? ನಿಮ್ಮ ಸಮಸ್ಯೆಯೊಂದಿಗೆ ಹೋರಾಡಲು ಸಾಧ್ಯವಿರುವಾಗ.
ಏಕೆ ಅಳು? ನಿಮ್ಮ ಸಮಸ್ಯೆಯನ್ನು ನೋಡಿ ನಗಲು ಸಾಧ್ಯವಿರುವಾಗ.
ಏಕೆ ಬೀಳು? ನಿಮ್ಮ ಸಮಸ್ಯೆಯ ಮೇಲೆ ಹಾರಲು ಸಾಧ್ಯವಿರುವಾಗ.
ಏಕೆ ಅದರೊಂದಿಗೆ ಗೆಳೆತನ? ನಿಮ್ಮ ಸಮಸ್ಯೆಯನ್ನು ಕೊಲ್ಲಲು ಸಾಧ್ಯವಿರುವಾಗ.

ಸಮಸ್ಯೆಯೊಂದಿಗೇ ಇರಿ.
ಸಮಸ್ಯೆಯೊಂದಿಗೇ ಬಾಳಿ.
ಆದರೆ ಮಲಗುವ ಮುನ್ನ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.
......................................................................................................................................
ಪ್ರತಿಯೊಬ್ಬರೂ ನಿಮ್ಮನ್ನು ಕಡೆಗಾಣಿಸುತ್ತಿದ್ದಾರೆಯೇ ?? ಅವರು ಕಡೆಗಾಣಿಸುತ್ತಿರುವುದನ್ನು ಕಡೆಗಾಣಿಸಿ ನೀವು ಏನು ಕೆಲಸ ಮಾಡ್ತಾ ಇದೀರೋ ಅದನ್ನು ಮುಂದುವರಿಸಿ.
......................................................................................................................................
ನೀವು ಬಹಳ ಸಲ ದೂರ ಮಾಡಿದ ವ್ಯಕ್ತಿ ನಿಮ್ಮನ್ನು ಖಂಡಿತ ಸಂಪರ್ಕಿಸಲು ಪ್ರಯತ್ನಿಸುವುದಿಲ್ಲ, ದೂರ ಮಾಡಿದ್ದಕ್ಕೆ ಕಾರಣವಿದೆ ಎಂದು ಅವರನ್ನು ನೀವು ನಂಬಿಸುವವರೆಗೆ. 
......................................................................................................................................
ಬೇರೆಯವರು ನಿಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂದು ಯೋಚಿಸುತ್ತಾ ಕೂರುವುದು ಸಮಯ ವ್ಯರ್ಥವಷ್ಟೇ. 
......................................................................................................................................
ಏನಾದರೂ ಒಳ್ಳೆಯದಾದರೆ ಅದಕ್ಕೆ ಇನ್ನೊಬ್ಬರು ಕಾರಣ ಅಂದುಕೊಳ್ಳಿ - ಅವರ ಮೇಲಿನ ನಿಮ್ಮ ಭಾವನೆ ಯಾವಾಗಲೂ ಒಳ್ಳೆಯದಾಗಿಯೇ ಇರುತ್ತದೆ.
ಏನಾದರೂ ತಪ್ಪಾದರೆ ಅದಕ್ಕೆ ನೀವೇ ಕಾರಣ ಅಂದುಕೊಳ್ಳಿ - ಅದೇ ತಪ್ಪು ನಿಮ್ಮಿಂದ ಇನ್ಯಾವತ್ತೂ ಆಗುವುದಿಲ್ಲ. 
......................................................................................................................................
ಅವರು ಏನು ಮಾಡಿದರು, ಹೇಗೆ ವರ್ತಿಸಿದರು ಅನುವುದರ ಬಗ್ಗೆ ಯೋಚಿಸಬೇಡಿ
ಬದಲಿಗೆ ನೀವು ಏನು ಮಾಡಬೇಕು, ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಯೋಚಿಸಿ 
......................................................................................................................................
ನೀವು ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದೀರ ಅಂತ ನೀವು ಭಾವಿಸಿದ ಕ್ಷಣ, ಆ ಒಳ್ಳೆಯ ಕೆಲಸ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಮನಸಿನಲ್ಲಿ ತನ್ನ ಮೌಲ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. 
..........................................................................................................................
ಇದನ್ನು ನಂಬಿರಿ !
"ನಿಮ್ಮ ಜೀವನದಲ್ಲಿ ಬಂದ / ಬರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮುಖ್ಯ."
ನೀವು ಯಾರನ್ನೂ ದ್ವೇಷಿಸಲಾರಿರಿ ! 
..........................................................................................................................
ಜಗಳ ಆಗಬಾರದು ಎಂದಿದ್ದರೆ ಕೆಲವು ಸಲ ನಮ್ಮ ಎದುರಿನವರು ಸುಳ್ಳು ಹೇಳುತ್ತಿದ್ದರೂ, ಅದು ಸುಳ್ಳು ಎಂದು ನಮಗೆ ಗೊತ್ತಿದ್ದರೂ, ನಾವು ಸುಮ್ಮನೆ ಹೌದೆಂದು ತಲೆ ಅಲ್ಲಾಡಿಸಬೇಕಾಗುತ್ತದೆ ! 
..........................................................................................................................
ಈಗಿನ 'ಈಗ' ಮುಂದೆ 'ಆವಾಗ' ಆಗತ್ತೆ.
'ಆವಾಗ' ಈ 'ಈಗ' ಇನ್ನೂ ಚೆನ್ನಾಗಿರಬೇಕು ಅಂತ ನಿಮಗೆ 'ಈಗ' ಅನ್ನಿಸ್ತ ಇದ್ಯ ?
..........................................................................................................................
ಒಂದನ್ನೇ ಆರಿಸಬೇಕು ಎಂದಿದ್ದರೂ, ನಿಮಗೆ ಬಹಳ ಆಯ್ಕೆಗಳು ಸರಿ ಎನಿಸಿದರೆ ಅವೆಲ್ಲವನ್ನೂ ಮಾಡಿ!
ಇಷ್ಟ ಪಟ್ಟಿದ್ದನ್ನೇ ಮಾಡಿದ ತೃಪ್ತಿ ನಿಮಗಿರುತ್ತದೆ.
ವಿ.ಸೂ. ಪರೀಕ್ಷೆಯಲ್ಲಿ ಕೊಟ್ಟ ಆಯ್ಕೆಗಳಿಗೆ ಇದನ್ನು ಅನ್ವಯಿಸಬೇಡಿ !
..........................................................................................................................
Decent ಆಗ್ ಇರೋ ಒಂದು profile picture ಹಾಕು
ಅಪರೂಪಕ್ಕೊಮ್ಮೆ Cover Photo Change ಮಾಡು
Photo / Video / STATUS upload ಮಾಡ್ಕೋ, TAG ಮಾಡು
ಬೇರೆ Updates ನ Like ಮಾಡು comment ಹೊಡಿ
ನೀನೆ ಒಂದು Group Create ಮಾಡು
"ನಾಳೆ ಬೆಳಗ್ಗೆ full Energy ಸಿಗತ್ತೆ" ಅನ್ಕೊಂಡು ಇಡೀ ದಿನ Game ಆಡು
ಯಾರೋ Request Send ಮಾಡ್ತಾರೆ ಚೆನ್ನಾಗಿದ್ರೆ Accept ಮಾಡ್ಕೋ
ಬೇಜಾರ್ ಆದಾಗ ಕೂತ್ಕೊಂಡ್ Chat ಮಾಡು!
ಹಳೆ Classmates ಹೊಸ Friendsದು ಫೋನ್ ನಂಬರ್ ತಗೋ
ಮೇಲೆ ಕೆಳಗೆ, ಕೆಳಗೆ ಮೇಲೆ Scroll ಮಾಡು!

ಇನ್ನೇನು ಉಳಿತ್ರಪ್ಪ facebook ಅಲ್ಲಿ????
..........................................................................................................................

~ ~ To view all the posts click on the Home Menu ~~

Friday 8 June 2012

"ಜೀವಿಗಳು" - ಒಂದು ಕಥೆ

"ನಿನ್ನೆ ರಾತ್ರಿ ಅರ್ಜೆಂಟ್ ಆಯ್ತು ಅಂತ ಟಾಯ್ಲೆಟ್ ಗೆ ಹೋದೆ."
"ಟಾಯ್ಲೆಟ್ ಗೆ ಅರ್ಜೆಂಟ್ ಆದಾಗ ಹೋಗದೆ ನಿದ್ದೆ ಬಂದಾಗ ಹೋಗ್ತಾರ?"
"ಅಲ್ಲಿ ನನ್ನ ಕೆಲಸ ಎಲ್ಲಾ ಮುಗಿದ ಮೇಲೆ ಬಾಗಿಲು ತೆಕ್ಕೊಂಡು ಹೊರಗೆ ಬಂದೆ."
"ಎಲ್ಲಾ ಮುಗಿದ ಮೇಲೆ ಹೊರಗೆ ಬರದೆ ಟಾಯ್ಲೆಟ್ ಅಲ್ಲೇ ಮಲಗ್ತಾರಾ ಯಾರಾದ್ರು? ತಲೆ ಸರಿ ಇದ್ಯ ನಿಂಗೆ?"
"ಲೇಯ್! ಏನಾಯ್ತು ಅಂತ ಹೇಳೋಕೆ ಬಿಡ್ತೀಯಾ ಇಲ್ವಾ?"
"ಬಿಡಲ್ಲ. ಏನಿವಾಗ?"
"ಹಾಳಾಗ್ ಹೋಗು! ನಾನ್ ಹೇಳ್ತೀನಿ. ಬೇಕಾದ್ರೆ ಕೇಳಿಸ್ಕೋ, ಬೇಡಾಂದ್ರೆ ಇದೇ ರೀತಿ ಉಲ್ಟಾ ಮಾತಾಡ್ತಾ ಇರು"
"ಸುಮ್ನೆ ಕೊರೀಬೇಡ. ಮುಂದೆ ಹೇಳು ಮಾರಾಯ"
"ಬಾಗಿಲು ತೆಕ್ಕೊಂಡು ಹೊರಗಡೆ ಬರ್ತೀನಿ ಐದಾರು ಮೆಟ್ಟಿಲು ಎದುರಿಗೆ"
"ಥೋ! ಅದರಲ್ಲಿ ಏನಿದೆ ವಿಶೇಷ?"
"ಮಂಗ ಮುಂಡೇದೆ! ನಮ್ಮನೆ ಟಾಯ್ಲೆಟ್ ಎದುರಿಗೆ ಮೆಟ್ಟಿಲು ಎಲ್ಲೋ ಇದೆ?"
"ಅರೇ! ಹೌದಲ್ವ?"
"ಹೂಂ ಮತ್ತೆ. ಹಾಳಾದ್ದು ಆಗಲೇ ಕರೆಂಟ್ ಹೋಗ್ಬೇಕಾ? ಕೈಯಲ್ಲಿ ಟಾರ್ಚ್ ಬೇರೆ ಇಲ್ಲ."
"ಮೈಯೆಲ್ಲಾ ಒಂದು ಸಲ ಜುಂ ಅಂತೇನೋ ಅಲ್ವ? ಬೆಳ್ಳಗೆ ಯಾವ್ದಾದ್ರು ಮೋಹಿನಿ ಕಂಡ್ಲ?"
"ಹೂಂ! ಜಯಂತಿ, 'ತಂಗಾಳಿಯಲ್ಲಿ ನಾನು' ಅಂತ ಹೋಗ್ತಾ ಇದ್ಲು. ಥೂ! ಕೇಳ ಮುಂದೆ. ಆ ಮೆಟ್ಟಿಲು ಇಳಿದು ಕೆಳಗೆ ಹೋದೆ. ತಕ್ಷಣ ಆ ಮೆಟ್ಟಿಲು ಮೇಲ್ಗಡೆ ಏನೋ ಶಬ್ದ ಆಯ್ತು. ಏನು ಅಂತ ತಿರುಗೋದ್ರೊಳಗೆ ಛಕ್ ಅಂತ ಬೆಳಕು"
"ಛಕ್ ಅಂತ ಶಬ್ದಾನು ಬಂತ ಅಥವಾ ಬರೀ ಬೆಳಕು ಮಾತ್ರ ಬಂತಾ?"
"ಶಬ್ದಾನು ಬಂತು ಕಣೋ! ಮೊದ್ಲು ಕರೆಂಟ್ ಬಂತು ಅನ್ಕೊಂಡೆ, ನೋಡಿದ್ರೆ ಕಣ್ಣು ಬಿಡೋಕೆ ಆಗ್ತಿಲ್ಲ. ಎಂಟ್ಹತ್ತು ಲಾರಿ ಎದುರಿಗೆ ನಿಲ್ಲಿಸ್ಕೊಂಡು  ಹೆಡ್ ಲೈಟ್ ಆನ್ ಮಾಡಿರೋ ಅಷ್ಟು ಬೆಳಕು ಇತ್ತು. ಬರೀ ಒಂದು ಕಡೆ ಅಲ್ಲ, ಸುತ್ತಲೂ!"
"ಆಮೇಲೆ?"
"ನಂಗೆ ಒಂದು ಸಲ ಏನಾಗ್ತಿದೆ ಅಂತಾನೆ ಗೊತ್ತಾಗ್ಲಿಲ್ಲ. ಕೃಷ್ಣ, ರಾಮ, ಅಲ್ಲಾ, ಈಶ್ವರ, ಏಸು, ಬುದ್ಧ ಎಲ್ಲಾರ್ನು ಕರೆದೆ. ಯಾರು ಬರ್ಲೇ ಇಲ್ಲ!"
"ಸಂಕಟ ಬಂದಾಗ ವೆಂಕಟರಮಣ! ಅವರನ್ನ ಕರೆದ್ಯಾ?"
"ಅವರೊಂದು ನೆನಪಾಗಿಲ್ಲ ನೋಡು! ಅಷ್ಟೊತ್ತಿಗೆ ಬೆಳಕಿಗೆ ನನ್ನ ಕಣ್ಣು ಅಡ್ಜಸ್ಟ್ ಆಗಿತ್ತು ಅನ್ಸುತ್ತೆ, ಒಂದೊಂದೇ ವಸ್ತುಗಳು ಕಾಣೋಕೆ ಶುರು ಆಯ್ತು"
"ಏನು ಕಾಣಿಸ್ತು?"
"ಮೊದ್ಲು ಸುತ್ತಲೂ ವೈರುಗಳು, ಕಂಪ್ಯೂಟರ್ ಥರದ್ದೇ ದೊಡ್ಡ ದೊಡ್ಡ ಮೆಷೀನುಗಳು ಕಂಡ್ವು."
"ರಜನಿಕಾಂತ್ ಫಿಲಂ ಅಲ್ಲಿ ಇದ್ದಂಗೆ! ಆಮೇಲೆ?"
"ಒಂಥರಾ ಹಂಗೆ ಇತ್ತು! ಬರೀ ಮೆಷೀನುಗಳು ಅನ್ಕೊಂಡ್ರೆ ನಾಕೈದು ಜನ ಕಂಡ್ರು, ಥೋ! ಜನ ಅಲ್ಲ, ಜೀವಿಗಳು!!"
"ಅನ್ಯ ಲೋಕದವ್ರಾ?"
"ಇರಬೇಕು! ಮನುಷ್ಯರ ಥರಾನೇ ಇದ್ವು, ಆದ್ರೆ ತಲೇನೇ ಇರ್ಲಿಲ್ಲ!"
"ಆಂ!"
"ಹೌದೋ. ಒಂಥರಾ ಬಿಳೀ ಬಟ್ಟೆ ಮೇಲೆ ಪೆನ್ಸಿಲ್ ಅಲ್ಲಿ ಗೀಚಿರೋ ರೀತಿ ಬಟ್ಟೆ ಹಾಕ್ಕೊಂದಿದ್ವು. ಅದು ಬಟ್ಟೆನಾ ಅಥವಾ ಅದರ ಮೈ ಇರೋದೇ ಆ ರೀತಿನಾ ಗೊತ್ತಾಗ್ಲಿಲ್ಲ!"
"ಆಮೇಲೆ? ಅವೇನಾದ್ರೂ ಮಾಡಿದ್ವಾ?"
"ಅವು ಒಂದು 25 - 30 ಅಡಿ ದೂರದಲ್ಲಿ ಇದ್ವು. ಅದೇ ಸಮಯದಲ್ಲಿ ನಾನು ಎಲ್ಲಿದೀನಿ ನೋಡಿ ಬಿಡೋಣ ಅಂತ ಮೇಲೆ, ಕೆಳಗೆ, ಸುತ್ತಲೂ ನೋಡಿದೆ"
"ಏನಿತ್ತು?"
"ಅದು ಆ ಜೀವಿಗಳ ವಾಹನ ಇರ್ಬೇಕು. ಆದ್ರೆ ಹಾರುವ ತಟ್ಟೆ ಥರ ಇರ್ಲಿಲ್ಲ, ಬದಲಿಗೆ ಕೋನ್ ಐಸ್ ಕ್ರೀಮ್ ಥರ ಇತ್ತು. ಹಿಂದೆ ತಿರುಗಿ ನೋಡ್ತೀನಿ ನಾನು ನಿಂತಿದ್ದ ಜಾಗಾನೆ ವಾಹನದ ತುದಿ!"
"ಹೊರಗೆ ಬಂದ್ಯಾ ಕೂಡ್ಲೇ?"
"ಇಲ್ಲ! ಸುಮ್ನೆ ಆ ಜೀವಿಗಳು ಇದ್ದ ಕಡೆ ನೋಡೋಣ ಅಂತ ತಿರುಗ್ತೀನಿ ನನ್ ಎದುರಿಗೇ ಬಂದು ನಿಂತಿವೆ ಎರಡು ಜೀವಿಗಳು! ಒಂದರ ಕೈಯಲ್ಲಿ ಕತ್ತರಿ ರೀತೀದೆ ಒಂದು ವಸ್ತು ಮತ್ತೆ ಕುಕ್ಕರ್ ಥರದ್ದು ಒಂದು ಪಾತ್ರೆ ಇತ್ತು"
"ಆಮೇಲೆ?"
"ನಂಗೆ ಹೆದರಿಕೆ! ನನ್ನ ತಲೇನೂ ಕತ್ತರಿಸಿ ಅವರ ಥರಾನೇ ಮಾಡ್ತಾರೇನೋ ಅಂತ. ಬರೀ ಕೈಯಲ್ಲಿ ನಿಂತಿದ್ದ ಜೀವಿ ಒಂದು ಕೈಯಲ್ಲಿ ನನ್ನ ಹಿಡ್ಕೊಳ್ತು. ನಾನು ತಪ್ಪಿಸ್ಕೊಳ್ಳೋಕೆ ಪ್ರಯತ್ನ ಮಾಡ್ತಾ ಇದೀನಿ, ಆಗ್ತಾನೇ ಇಲ್ಲ! ಹಂಗೋ ಹಿಂಗೋ ತಪ್ಪಿಸ್ಕೊಂಡು ಓಡಬೇಕು ಅನ್ನೋ ಅಷ್ಟರಲ್ಲಿ ಆ ಜೀವಿ ನನ್ನ ಕಾಲಿಗೆ ತನ್ನ ಕಾಲು ಅಡ್ಡ ಕೊಡ್ತು. ನಾನು ಬೋರಲಾಗಿ ಬಿದ್ದೆ. ಕಣ್ಣೆಲ್ಲ ಮಂಜು ಮಂಜು. ಆಗಲೇ ಆ ಜೀವಿ ಕುಕ್ಕರ್ ಥರದ ಪಾತ್ರೆ ಒಳಗಿಂದ ಒದ್ದೆಯಾಗಿ ನೀರಿನ ರೀತಿ ಇರೋ ಏನೋ ಒಂದನ್ನ ತೆಗೆದು ನನ್ನ ಮುಖಕ್ಕೆ ಹಚ್ಚೋಕೆ ಶುರು ಮಾಡ್ತು. ನಾನು ನನ್ನ ಶಕ್ತಿ ಎಲ್ಲಾ ಕೂಡಿಸಿ ನನ್ನ ಕೈ ಎತ್ತಿ ಅದರ ಕೈಗೆ ಹೊಡೆದೆ. ನಮ್ಮನೆ ನಾಯಿ ಕುಂಯ್ ಕುಂಯ್ ಅಂತ ಓಡಿ ಹೋಯ್ತು !!"
"ಅಂದರೆ ಇಲ್ಲೀ ತನಕ ನೀನು ಹೇಳಿದ್ದು?"
"ನೀನು ಏನು ತಿಳಿದುಕೊಂಡೆಯೋ ಅದೇ!"
"ಛೀ!! ಅದ್ಕೆ ಈ ಹಾಸಿಗೆ ಇಲ್ಲಿ ಒಣಗೋಕೆ ಹಾಕಿರೋದು. ರಾತ್ರಿ ಟಾಯ್ಲೆಟ್ ಅಂತ ಇದರಲ್ಲೇ?!! ಯಪ್ಪಾ! ಥೂ!"
"ಈಗ ಅದೆಲ್ಲ ಇರ್ಲಿ! ಮೊನ್ನೆ ಶುಕ್ರ ಗ್ರಹಣ ನೋಡಿದ್ಯಾ?"

Photo Courtesy : Google

~ ~ To view all the posts click on the Home Menu ~~

Tuesday 5 June 2012

ಪರಿಸರ ದಿನ

ಇವತ್ತು ವಿಶ್ವ ಪರಿಸರ ದಿನ ಅಂತ ಗೊತ್ತಾದ ಕೂಡಲೇ ನನಗೆ ನೆನಪಾದ ಘಟನೆ !

ನಾ ಚಿಕ್ಕವನಿದ್ದಾಗ ಯಾವಾಗಲೋ ಒಂದು ದಿನ ಎಲ್ಲೋ ಒಂದು ಕಡೆಗೆ ಅಮ್ಮನ ಜೊತೆಗೆ  ಬಸ್ಸಿನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆ ಜೋರು ಹಸಿವಾಯ್ತು ( ಸಣ್ಣ ಮಕ್ಕಳಿಗೆ ಅದೊಂಥರ ಖಾಯಿಲೆ ಅನ್ನಿ). ಸರಿ! ಅಮ್ಮನ ಬಳಿ ಗಲಾಟೆ ಆರಂಭ "ಅಮ್ಮಾ! ಏನಾದ್ರು  ಕೊಡ್ಸೆ?" ಅಂತ. ಅವಳಿಗೂ ಬೈದು ಬೈದು ಸುಸ್ತಾಯ್ತು ಅನ್ಸತ್ತೆ ಯಾವ್ದೋ ಒಂದು ಕಡೆ ಬಸ್ಸು ನಿಲ್ಲಿಸಿದಾಗ "ಏನ್ ಬೇಕೋ ತಗೊಂಡ್ಬಾ" ಅಂತ ದುಡ್ಡು ಕೊಟ್ಳು ! ನಾನು ಖುಷಿಯಿಂದ ಹೋಗಿ ಒಂದು ಪ್ಯಾಕು ಬಿಸ್ಕೆಟ್ , ಒಂದು ಪ್ಯಾಕು ಚಿಪ್ಸ್ ತಗೊಂಡು ಬಂದೆ. ಮೊದ್ಲು ಚಿಪ್ಸ್ ತಿನ್ನೋಣ ಅಂತ ತಿನ್ನೋಕೆ ಶುರು ಮಾಡ್ದೆ. ಹಸಿವಾಗಿದ್ದಕ್ಕೋ ಏನೋ ಬೇಗ ಖಾಲಿ ಆಯ್ತು. ಚಿಪ್ಸ್ ತಿಂದು ಆದ್ಮೇಲೆ ಖಾಲಿ ಕವರ್ ಹಿಡ್ಕೊಂಡು ಏನ್ ಮಾಡ್ತಾರೆ? ಹೊರಗೆ ಎಸೆಯೋಣ ಅಂತ ಕಿಟಕಿಯಿಂದ ಕೈ ಹೊರಗೆ ಹಾಕಿದ್ದೆನಷ್ಟೆ, ಅಮ್ಮ ನನ್ನ ಕೈಯನ್ನು ಹಿಡಿದು ಒಳಗೆ ಎಳೆದುಕೊಂಡಳು. ಈ ಸಲ ನಾನೇನು ತಪ್ಪು ಮಾಡಿದೆ ಅಂತ ಅನ್ಕೊಳ್ತಾ ಇರ್ಬೇಕಾದ್ರೆ ಆ ಪ್ಲಾಸ್ಟಿಕ್ ಕವರ್ ಅನ್ನು ನನ್ನ ಕೈಯಿಂದ ತಗೊಂಡು, ನನ್ನ ಕಿವಿ ಹಿಂಡುತ್ತಾ "ಎಷ್ಟು ಸಲ ಹೇಳಿದೀನಿ ನಿಂಗೆ? ಹೊರಗೆ ಎಲ್ಲೂ ಕಸ ಹಾಕಬೇಡ, ಮನೆಗೆ ತಗೊಂಡು ಬಂದು ಮನೇಲೆ ಕಸದ ಬುಟ್ಟಿಗೆ ಹಾಕು ಅಂತ" ಅಂತ ಹೇಳಿ ಆ ಪ್ಲಾಸ್ಟಿಕ್ ಕವರ್ ನ ಅವಳ ಹತ್ರ ಇದ್ದ ಬ್ಯಾಗ್ ಒಳಗಡೆ ಹಾಕಿಕೊಂಡಳು. ನಮ್ಮ ಸಣ್ಣ ಬುದ್ದಿ ಎಲ್ಲಿಗ್ ಹೋಗತ್ತೆ? "ಅಲ್ಲಿ ಗುಡಿಸುತ್ತ ಇದ್ರು  ಹೆಂಗಿದ್ರು ಗುಡಿಸ್ತಾರಲ್ಲ ಅದ್ಕೆ ಹಾಕೋಕೆ ಹೋದೆ" ಅಂದೆ.
"ಅವ್ರು ಗುಡಿಸಲಿ ಬಿಡಲಿ, ನೀನು ಮನೆಗೆ ತಗೊಂಡು ಬರೋಕೆ ಏನ್ ತೊಂದ್ರೆ ನಿಂಗೆ?" ಅಂತ ಹೇಳಿ ದೊಡ್ಡಕ್ಕೆ ಕಣ್ಣು ಬಿಟ್ಲು. ನಾನು ಮೂತಿ ಉದ್ದ ಮಾಡಿ ಸುಮ್ಮನೆ ಕುಳಿತೆ. ಅವತ್ತಿನ ಮಟ್ಟಿಗೆ ನಂಗೆ ಸಿಟ್ಟು ಬಂದಿದ್ರೂ ಆ ಘಟನೆ ಆದ ಮೇಲೆ ಇಲ್ಲಿಯವರೆಗೂ ನಾನು ಹೊರಗಡೆ ಎಲ್ಲೂ ಕಸದ ಬುಟ್ಟಿ ಬಿಟ್ಟು ಬೇರೆ ಕಡೆ ಕಸ ಹಾಕಿಲ್ಲ!

ಇದನ್ನು ಓದಿದ ಮೇಲೆ ನೀವೂ ಹೊರಗಡೆ ಕಸ ಹಾಕಲ್ಲ ಅಂತ ತೀರ್ಮಾನಿಸಿದರೆ ನಾ ಬರೆದದ್ದು ಸಾರ್ಥಕ :)

~ ~ To view all the posts click on the Home Menu ~~