Monday 24 February 2014

ಊಟದ ಹೊಟ್ಟೆ !

ಮಧ್ಯಾಹ್ನ ಊಟದ ಟೈಮು, ಸಿಕ್ಕಾಪಟ್ಟೆ ಹಸಿವಾಗ್ತಿದೆ. Empty mind is Devil's workshop ಅನ್ನೋ ಗಾದೆ ಗೊತ್ತಿತ್ತು, ಆದ್ರೆ ಎಂಟೀ ಹೊಟ್ಟೆಯಿಂದಾನು ತಲೇಲಿ ಇಂಥ ಪೆಕ್ರು ಪೆಕ್ರು ಯೋಚ್ನೆಗಳು ಬರ್ತವೆ ಅಂತ ಗೊತ್ತಿರ್ಲಿಲ್ಲ.

ವಿಸ್ಯ ಏನಪ್ಪಾ ಅಂತಂದ್ರೆ, ನಮ್ಮೆಲ್ರಿಗೂ ಇರೋ ಈ ಹೊಟ್ಟೆ ಅನ್ನೋ ಸಿಮೆಂಟ್ ಕಲ್ಸೋ ಮೆಶೀನಿಗೆ ಸಮಯಕ್ಕೆ ಸರಿಯಾಗಿ ಏನಾದ್ರೂ ಒಂದು ಹಾಕಿಲ್ಲಾ ಅನ್ನೋದು ನಮಗೆ ಮಾತ್ರ ಗೊತ್ತಿದ್ರೆ ನಮಗೇ ಸುಸ್ತಾಗುತ್ತೆ, ಊರವ್ರಿಗೆಲ್ಲಾ ಗೊತ್ತಿದ್ರೆ ಸರ್ಕಾರನೂ ಸುಸ್ತಾಗುತ್ತೆ!
ಈಗ ಸದ್ಯದ ಮಟ್ಟಿಗೆ ಈ ಹೊಟ್ಟೆ ನಮ್ಮ ದೇಹದ ಭಾಗ ಅಲ್ಲಾ ಅನ್ಕೊಳ್ಳೋಣ!

ಈ ಹೊಟ್ಟೆಗೆ ನಮ್ಗೆ ಪುರ್ಸೊತ್ತಾದಾಗ ಒಂದಷ್ಟು ತಿನ್ನೋಕೆ ಕೊಟ್ಟು ಉಳಿದಿರೋ ದಿನ ಸುಮ್ನೆ ಬಾಯಿ ಮುಚ್ಚಿಕೊಂಡು ಇರೋಕೆ ಹೇಳೋ ಹಾಗಿದ್ರೆ, ಯಾವುದೋ ಒಂದು ಮದ್ವೆಮನೆಗೆ ಹೋಗಿ, ಸಿಕ್ಕಾಪಟ್ಟೆ ತಿಂದು, "ಆಯ್ತು! ಇನ್ನು ಒಂದು ತಿಂಗಳು ಏನೂ ಕೇಳೋ ಹಾಗಿಲ್ಲ ನೀನು" ಅಂತಿದ್ವೇನೋ?
"ಎಲ್ಲಾರು ಮಾಡುವುದು ಹೊಟ್ಟೆಗಾಗಿ" ಅನ್ನೋ ದಾಸರ ಪದ,
"ತುತ್ತು ಅನ್ನ ತಿನ್ನೋಕೆ" ಅನ್ನೋ ಹಾಡು,
ಫಿಲಂನಲ್ಲಿ ಬರೋ "ನನ್ನ ಅನ್ನದ ಋಣ ನಿನ್ಮೇಲಿದೆ" ಅನ್ನೋ ಸಿಕ್ಕಾಪಟ್ಟೆ ಎಮೋಶನಲ್ ಡೈಲಾಗು,
"ಊಟ ಬಲ್ಲವಿನಿಗೆ ರೋಗವಿಲ್ಲ" ಅನ್ನೋ ಗಾದೆ,
ಮಧ್ಯಾಹ್ನದ ಹೊತ್ತಿಗೆ ಬರೋ "ಚವಿರುಸಿ" ಕಾರ್ಯಕ್ರಮ,
ಬೇಯೋಕೆ ಇಪ್ಪತ್ತು ನಿಮಿಷ ತಗೋಳೋ "2 ಮಿನಿಟ್ ನ್ಯೂಡಲ್ಸ್",
ದುಡ್ಡು ಇಸ್ಕೊಂಡು 'ಗಾಳಿಯನ್ನು' ಪೊಟ್ಟಣದಲ್ಲಿ ತುಂಬಿಸಿ ಕೊಡೋ "ಸ್ನ್ಯಾಕ್ಸ್ ಗಳು" ಇವ್ಯಾವುದೂ ಇರ್ತಿರ್ಲಿಲ್ಲ!
ಒಟ್ನಲ್ಲಿ ತಿನ್ನೋ ವಿಷಯದ ಬಗ್ಗೆ ಯಾರೂ ಯೋಚ್ನೆ ಮಾಡ್ತಿರ್ಲಿಲ್ಲ.
ಇನ್ನು ತಿನ್ನೋದೇ ಅಪರೂಪ ಅಂದ್ಮೇಲೆ, ಕೆಲಸ ಮಾಡೋ ಅವಶ್ಯಕತೇನೆ ಇರ್ತಿರ್ಲಿಲ್ಲ.
ಯಾರೂ 'ಪಾಯಿಖಾನೆ'ಗಳನ್ನೂ ಕಟ್ತಿರ್ಲಿಲ್ಲ (ಹೊಟ್ಟೆ ಒಳಗೆ ಏನಾದ್ರೂ ಇದ್ರೆ ತಾನೆ ಹೊರಗೆ ಹೋಗೋದು!)
ಡಾರ್ವಿನ್ ವಿಕಾಸವಾದದ ಪ್ರಕಾರ, ನಮ್ಮ ದೇಹದಲ್ಲಿ ಈ ರೀತಿ ಜಾಸ್ತಿ ಉಪಯೋಗಿಸದೇ ಇರೋ 'ಹೊಟ್ಟೇನೆ' ಇರ್ತಿರ್ಲಿಲ್ಲ!

ಆದ್ರೆ ಸದ್ಯದ ಮಟ್ಟಿಗೆ ಅದ್ಯಾವ್ದೂ ಆಗಿಲ್ಲ, ವಿಶಲ್ ಹೊಡೆದು ಹತ್ತು ನಿಮಿಷದ ಮೇಲಾಯ್ತು, ಕುಕ್ಕರ್ರಿನಲ್ಲಿ ಪ್ರೆಶರ್ ಕಡ್ಮೆ ಆಗಿರುತ್ತೆ. ಇನ್ನು ಊಟ ಮಾಡದೇ ಇರೋಕೆ ಆಗಲ್ಲ.
ಬರ್ತೀನಿ.

- ಯೋಚಿತ

Photo Courtesy - Google Images !