Friday 29 March 2013

ತೀರ್ಥಹಳ್ಳಿಯಲ್ಲೊಂದು ಹೋಳಿ

ದಾರೀಲಿ ಸಿಕ್ಕಿದವರೆಲ್ಲಾ ನಮಗೆ ಬಣ್ಣ ಹಾಕ್ತಾರೆ ಅನ್ಕೊಂಡು ಸ್ವಲ್ಪ ಡಾರ್ಕ್ ಕಲರ್ ಬಟ್ಟೆ ಹಾಕ್ಕೊಂಡು ಕಾಲೇಜಿಗೆ ಹೊರ್ಟಿದ್ವಿ. ಆಗ ನಾವಿನ್ನೂ ಡಿಪ್ಲೋಮಾ ಎರಡನೇ ಸೆಮಿಸ್ಟರ್ ನಲ್ಲಿ ಓದ್ತಾ ಇದ್ದಿದ್ರಿಂದ ಕಾಲೇಜಿಗೆ ಹೋಗೋದು ತಪ್ಪಿಸ್ತಿದ್ದಿದ್ದು ಕಡಿಮೆ. ಕಾಲೇಜಿನಲ್ಲಿ ಬೇರೆ ಎಲ್ಲಾ ಕ್ಲಾಸ್ ಗಳಲ್ಲಿ ಮುಖಕ್ಕೆಲ್ಲ ಬಣ್ಣ ಬಳ್ಕೊಂಡು ಓಡಾಡ್ತಿದ್ರೂ ನಮ್ಮ ಕ್ಲಾಸಲ್ಲಿರೋ ಯಾರಿಗೂ ಅದ್ಯಾಕೋ ಹೋಳಿ ಆಡೋ ಮನಸೇ ಆಗಿರ್ಲಿಲ್ಲ ( ಅಥವಾ ಆ ರೀತಿ ನಟಿಸುತ್ತಿದ್ದರು !).

ಮಧ್ಯಾನ್ಹ ಕ್ಲಾಸ್ ಮುಗೀತು, ಸಧ್ಯ ಬಟ್ಟೆ ತೊಳೆಯೋದು ಉಳೀತು, ಯಾರೂ ಬಣ್ಣ ಹಾಕಿಲ್ವಲ್ಲ ಅನ್ಕೋತಾ ಕಾಲೇಜ್ ಕಾಂಪೌಂಡಿಂದ ಹೊರಗೆ ಬರ್ತಾ ಇರ್ಬೇಕಾದ್ರೆ "ಠಪ್" ಅಂತ ತಲೆಗೆ ಒಂದು ಏಟು ಬಿತ್ತು ! ಯಾರು ಹೊಡೆದಿದ್ದು ಅಂತ ನೋಡೋ ಮೊದ್ಲು, ಯಾವುದರಲ್ಲಿ ಹೊಡೆದಿದ್ದಾರೆ ಅಂತ ನೋಡೋದು ಮನುಷ್ಯನ ಲಕ್ಷಣ ಇರಬೇಕು. ಯಾವುದರಲ್ಲಿ ಹೊಡೆದಿದ್ದಾರೆ ಅಂತ ಕೈಯಲ್ಲಿ ಮುಟ್ಟಿ ನೋಡೋ ಅವಶ್ಯಕತೆಯೇ ಬರಲಿಲ್ಲ. ತಲೆಯ ಮೇಲೆ ಬಿದ್ದಿದ್ದ ಮೊಟ್ಟೆಯ ತಿರುಳು ಇಳಿದು ಮುಖದ ಮೇಲೆ ಬರ್ತಿತ್ತು. ತಲೆ ಮೇಲೆ ಏನೋ ಬಿದ್ದಿದ್ದು, ಅದೇನು ಅಂತ ನಾನು ನೋಡಿದ್ದು, ಯಾರು ಹೊಡೆದಿದ್ದು ಅಂತ ತಿರುಗಿದ್ದು ಇವೆಲ್ಲ ಎರಡ್ಮೂರು ಸೆಕೆಂಡಿನಲ್ಲೇ ನಡೆದಿದ್ರೂ ನಾನು ತಿರುಗುವಾಗ ತಡವಾಗಿತ್ತು! ಈ ಸಲ ಸೀದಾ ನನ್ನ ಹಣೆಗೇ ಒಂದು ಮೊಟ್ಟೆ ಬಿದ್ದಿತ್ತು.

ತಡವಾಗಿಯಾದ್ರೂ ನಮಗೆ ಎಚ್ಚರವಾಯಿತು, ನಮ್ಮ ಕ್ಲಾಸಿನವರೂ ಹೋಳಿ ಆಡ್ತಿದಾರೆ ಅಂತ! ಆಮೇಲೆ ಬಣ್ಣ, ಟೊಮ್ಯಾಟೋ, ಮೊಟ್ಟೆ, ಕೊನೆಗೆ ಕಲ್ಲು, ಮಣ್ಣನ್ನೂ ಒಬ್ಬರಿಗಿಬ್ಬರು ಮೈ ಮೇಲೆ ಎರಚಿಕೊಳ್ಳುತ್ತಾ ಹಾಸ್ಟೆಲ್ ಕಡೆ ಹೊರೆಟೆವು. ಕಾಲೇಜಿಂದ ನಮ್ಮ ಹಾಸ್ಟೆಲ್ ಮೂರು ಕಿ.ಮೀ. ದೂರ ಇದ್ದಿದ್ದರಿಂದ ಅಷ್ಟು ದೂರವೂ ನಮ್ಮ ಹೋಳಿ ಆಟ ಮುಂದುವರಿಯಿತು.

ಹಾಸ್ಟೆಲ್ ಹತ್ತಿರ ಹೋಗೋವಾಗ ಎಲ್ಲರ ಮೈ ವಿವಿಧ ಬಣ್ಣಗಳಿಂದ ತುಂಬಿ ಹೋದ್ದರಿಂದ ಸ್ನಾನಕ್ಕೆ ಹೊಳೆಗೆ ಹೋಗೋಣಾ ಎಂದಾಯಿತು. ತೀರ್ಥಹಳ್ಳಿ ಎಂಬ ಪೇಟೆಗೆ ಹೋದ ಪ್ರತಿಯೊಬ್ಬರೂ ಒಂದಲ್ಲಾ ಒಂದು ಬಾರಿ ಹೋಗಲೇ ಬೇಕಾದ ರಾಮ ಮಂಟಪದ ಹತ್ತಿರ ಸ್ನಾನಕ್ಕೆ ಹೋದ್ವಿ. ಆ ತುಂಗಾ ನದೀನೋ, ಮಳೆಗಾಲದಲ್ಲಿ ಇದೇ ರಾಮಮಂಟಪವನ್ನು ತನ್ನ ನೀರಿನಿಂದ ಮುಚ್ಚಲು ಹವಣಿಸಿ ಹೆಚ್ಚಿನಸಲ ಯಶಸ್ವಿಯೂ ಆಗುವಂಥದ್ದು (ರಾಮಮಂಟಪ ಮುಳುಗಿದರೆ ನಮ್ಮ ಕಾಲೇಜಿಗೆ ರಜೆ ಕೊಡುತ್ತಿದ್ದರಿಂದ ನಾವೂ ಅದಕ್ಕೇ ಕಾಯ್ತಾ ಇದ್ವಿ!). ಅಂತಹ ತುಂಗೆ ಬೇಸಿಗೆಯಲ್ಲಿ ಮಾತ್ರ ರಾಮಮಂಟಪದ ಕಾಲಿನ ಬಳಿಯೇ ಹರಿಯುತ್ತಿರುತ್ತಾಳೆ. ಆ ಜಾಗಕ್ಕೇ ನಮ್ಮ ಗುಂಪು ಸ್ನಾನಕ್ಕೆ ಹೋಗಿದ್ದು.

ಆ ಗುಂಪಿನಲ್ಲಿದ್ದ ಎಲ್ಲರಿಗೂ ಅಲ್ಪ ಸ್ವಲ್ಪವಾದರೂ ಈಜಲು ಬರುತ್ತಿತ್ತು. ನನ್ನ ಸ್ನೇಹಿತ 'ಪೂರ್ಣ'( +Tejaswi Poornachandra ) ಹಾಗೂ ನನ್ನನ್ನು ಬಿಟ್ಟು! ಸುತ್ತಲೂ ಈಜಲು ಬರುವವರೇ ಇದ್ದಿದ್ರಿಂದ ನಾವೂ ನೀರಿಗೆ ಇಳಿದ್ವಿ. ಅಷ್ಟೇನೂ ಆಳವಿಲ್ಲದ ಜಾಗದಲ್ಲೂ ನಾವು ಮುಳುಗುವಷ್ಟಿದ್ದ ಜಾಗಕ್ಕೆ ಹೋಗಿ, ಒಂದೆರಡು ಬಾರಿ ಮುಳುಗುವಂತಾಗಿ, ಉಳಿದವರೆಲ್ಲಾ ನಮ್ಮನ್ನು ಆ ಆಳದಿಂದ ಹೊರಗೆ ತಳ್ಳಿ. ಈ ರೀತಿ ನಮ್ಮಿಬ್ಬರಿಗೂ ಮೂರ್ನಾಲ್ಕು ಬಾರಿಯಾದರೂ ಆಯಿತು! ಆ ರೀತಿ ಮುಳುಗಿದಾಗ ಸತ್ತೇ ಹೋಗ್ತೀವೇನೋ ಅನ್ನಿಸಿತ್ತು. ಆದರೆ ನಿಜವಾಗ್ಲೂ ಆ ಘಟನೆ ಆಗ್ತಿತ್ತೇನೋ ಅನ್ನಿಸಿದ್ದು ಸ್ವಲ್ಪ ಸಮಯದ ನಂತರ!

ನಾವೆಲ್ಲರೂ ಇನ್ನೂ ಈಜ್ತಾ ಇರ್ಬೇಕಾದ್ರೆ ನಮ್ಮ ಕಾಲೇಜಿನವನೇ ಒಬ್ಬ ಬಂದು "ಏಳ್ರೋಲೇ! ಬರ್ರೋ ನೀರಿಂದ ಮೇಲೆ. ಅಲ್ಲಿ ನಮ್ ಕಾಲೇಜವ್ನು ಒಬ್ಬ ಹೋಗಿದ್ದು ಸಾಲದೇನೋ! ಬನ್ರೋ" ಅಂತ ಬಯ್ಯೋಕೆ ಶುರುಮಾಡಿದ. ತಣ್ಣನೆಯ ನೀರಿನೊಳಗಿದ್ರೂ ಮೈಯೆಲ್ಲಾ ಯಾಕೋ ಬಿಸಿಯಾದಂತಾಯ್ತು. ಎಲ್ರೂ ನೀರಿಂದ ಹೊರಗೆ ಬಂದು 'ಏನಾಯ್ತು?' ಅಂತ ವಿಚಾರಿಸಿದ್ವಿ. ನಮ್ಮ ಕಾಲೇಜಿನವನೇ ಬೇರೆ ಬ್ರಾಂಚ್ ಅಲ್ಲಿ ಓದುತ್ತಿದ್ದ ಒಬ್ಬ ಹುಡುಗ ಮತ್ತವನ ಸ್ನೇಹಿತರು, ನಮ್ಮಂತೆಯೇ ಹೋಳಿ ಆಡಿ ಸ್ನಾನಕ್ಕೆ ಹೊಳೆಗೆ ಹೋಗಿದ್ದರು. ಅವರು ಸ್ನಾನಕ್ಕೆ ಹೋದ ಜಾಗಕ್ಕೂ ನಾವಿದ್ದ ಜಾಗಕ್ಕೂ ತುಂಗಾ ನದಿಯಲ್ಲಿ ನಾಲ್ಕೈದು ಕಿ.ಮೀ. ಅಂತರವಿತ್ತಷ್ಟೆ. ತುಂಗೆ ಅವನ ಮೈ ಮೇಲಿದ್ದ ಹೋಳಿಯ ಬಣ್ಣ ತೊಳೆಯುವ ಬದಲು ಅವನನ್ನೇ ತೊಳೆದುಕೊಂಡು ಹೋಗಿದ್ದಳು.

ಎಷ್ಟು ನಿಜಾನೋ ಗೊತ್ತಿಲ್ಲ ಪ್ರತೀ ಹೋಳಿಯಲ್ಲಿ ತುಂಗೆಯಲ್ಲಿ ಒಬ್ಬರಾದರೂ ಲೀನರಾಗುತ್ತಾರೆಂದು ಒಂದಷ್ಟು ಹಿರಿಯರು ಹೇಳಿದ್ದನ್ನು ಕೇಳಿದ್ದೇನೆ. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರಯತ್ನಿಸಿಲ್ಲ.
ಅದಾದ ಮುಂದಿನ ಎರಡು ವರ್ಷ ಕಾಲೇಜಿನಲ್ಲಿ ಹೋಳಿಯನ್ನು ನಿಷೇಧಿಸಲಾಗಿತ್ತು. ಈಗ ಹೇಗಿದೆಯೋ ಗೊತ್ತಿಲ್ಲ.
ಅದಾದ ನಂತರ ಅದೇ ರಾಮಮಂಟಪದ ಹತ್ತಿರ ಬಹಳ ಸಲ ಈಜಲು ಹೋಗಿದೀವಿ. ಆದರೆ ಹೋಳಿ ಹಬ್ಬದ ದಿನ ಮುಳುಗಿದಂತೆ ನಾವು ಇನ್ಯಾವತ್ತೂ ಆ ಜಾಗದಲ್ಲಿ ಮುಳುಗಿಲ್ಲ.
ಏನು ಮಾಡೋದು ಹೇಳಿ? ಕೆಟ್ಟವರು ಜಾಸ್ತಿ ದಿನ ಬದುಕ್ತಾರಂತೆ.


Photo Courtesy : Google !