Sunday 30 December 2012

ದಯವಿಟ್ಟು ಕ್ಷಮಿಸಿ


ಕೆಲ ದಿನಗಳ ಹಿಂದೆ ಡೆಲ್ಲಿಯಲ್ಲಿ ನಡೆದ ಗ್ಯಾಂಗ್ ರೇಪ್ ವಿರುದ್ಧ ಡೆಲ್ಲಿ ಹಾಗೂ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ನಿನ್ನೆ ಬೆಳಿಗ್ಗೆ ಆ ಯುವತಿ ತೀರಿಕೊಂಡಮೇಲಂತೂ ಪ್ರತಿಭಟನೆಗಳು ಜೋರಾಗುತ್ತಿದೆ. ಈ ಸಂದರ್ಭದಲ್ಲಿ ಮಾನವೀಯತೆ ಇರುವ ಪ್ರತಿಯೊಬ್ಬರೂ ಕೇಳುತ್ತಿರುವ ಪ್ರಶ್ನೆ "ಆ ಕ್ರೂರ ಅತ್ಯಾಚಾರಿಗಳಿಗೆ ಶಿಕ್ಷೆ ಯಾವಾಗ?" ಅಂತ.

ಸದ್ಯದ ಮಟ್ಟಿಗೆ ಆ ಪ್ರಶ್ನೆ, ಅದಕ್ಕೆ ಆದಷ್ಟು ಬೇಗ ಸರ್ಕಾರದಿಂದ ಉತ್ತರ ಪಡೆಯಬೇಕೆಂಬ ಹಂಬಲ ಸರಿಯೇ ಆಗಿದ್ದರೂ, ಅಷ್ಟರಿಂದಲೇ ಮುಂದಾಗಬಹುದಾದ ಈ ರೀತಿಯ ಅಮಾನವೀಯ ಘಟನೆಗಳನ್ನು ನಿಲ್ಲಿಸಲು ಸಾಧ್ಯವಾಗುತ್ತದೆ ಅಂತ ಹೇಳಲಾಗುವುದಿಲ್ಲ. ಇಷ್ಟೆಲ್ಲ ಪ್ರತಿಭಟನೆಗಳ ಮಧ್ಯದಲ್ಲಿ ಇನ್ನೂ ವರದಿಯಾಗುತ್ತಿರುವ ಅತ್ಯಾಚಾರ ಪ್ರಕರಣಗಳೇ ಇದಕ್ಕೆ ಸಾಕ್ಷಿ.


ಈ ರೀತಿಯ ಘಟನೆಗಳಿಗೆ ಪ್ರತ್ಯಕ್ಷವಾಗಿ ಆ ಅತ್ಯಾಚಾರಿಗಳೇ ಕಾರಣರಾಗಿದ್ದರೂ, ಪರೋಕ್ಷವಾಗಿ ಸರ್ಕಾರ, ಸಂವಿಧಾನ, ಮಾಧ್ಯಮ, ಪೋಲಿಸರುಗಳ ಜೊತೆ ಇದನ್ನು ಬರೆಯುತ್ತಿರುವ ನಾನು, ಓದುತ್ತಿರುವ ನೀನು, ಈ ದೇಶದ ಪ್ರತಿ ಪ್ರಜೆಯೂ ಕಾರಣವಲ್ಲವೆ?

  1. ಇಂತಹ ಅತ್ಯಾಚಾರಿಗಳಿಗೆ ಅತ್ಯುಗ್ರ ಶಿಕ್ಷೆ ಕೊಟ್ಟು ಇನ್ಯಾರಾದರೂ ಈ ರೀತಿ ಮಾಡಿದರೆ ನಿಮಗೂ ಇದೇ ಗತಿ ಅಂತ ಸರ್ಕಾರ, ಸಂವಿಧಾನಗಳು ಹೇಳಿದ್ದರೆ ಇವತ್ತು ಈ ರೀತಿ ಆಗ್ತಿರಲಿಲ್ಲವೇನೋ?
  2. ಇಂತಹ ಪ್ರಕರಣಗಳಲ್ಲಿ ದುಡ್ಡಿನ ಮುಖ ನೋಡಿ ಹಲ್ಲು ಕಿಸಿಯದೆ, ತಪ್ಪು ಮಾಡಿದವರಿಗೆ ಪೋಲೀಸರು ಪ್ರಾಮಾಣಿಕವಾಗಿ ಶಿಕ್ಷೆ ಕೊಡಿಸಿದ್ದರೆ ಇವತ್ತು ಈ ರೀತಿ ಆಗ್ತಿರಲಿಲ್ಲವೇನೋ?
  3. ಟಿ.ಆರ್.ಪಿ., ಪ್ರಚಾರಕ್ಕಾಗಿ ಅಲ್ಲದೆ ನಿಜವಾದ ಸುದ್ದಿಯನ್ನು ಸರಿಯಾದ ರೀತಿಯಲ್ಲಿ ತಿಳಿಸುವುದನ್ನು ಮಾಧ್ಯಮಗಳು ಮಾಡಿದ್ದರೆ ಇವತ್ತು ಈ ರೀತಿ ಆಗ್ತಿರಲಿಲ್ಲವೇನೋ?
  4. ಎಲ್ಲಕ್ಕಿಂತ ಹೆಚ್ಚಾಗಿ ಹಿಂದೆ ನಡೆದ ದೌರ್ಜನ್ಯಗಳ ವಿರುದ್ಧವೂ ನಾವು ಇದೇ ರೀತಿ ಪ್ರತಿಭಟಿಸಿದ್ದರೆ ಇವತ್ತು ಈ ರೀತಿ ನಡೀತಿರಲಿಲ್ಲವೇನೋ?

ಇಲ್ಲಿಯವರೆಗೆ ಈ ರೀತಿ ಅತ್ಯಾಚಾರಕ್ಕೆ ಬಲಿಯಾದ, ಬದುಕಿಯೂ ಸತ್ತಂತಿರುವ ಅದೆಷ್ಟೋ ಜನರಿಗೆ ಕೈ ಮುಗಿದು ಕೇಳಿಕೊಳ್ಳೋಣ
"ದಯವಿಟ್ಟು ಕ್ಷಮಿಸಿ. ನಮ್ಮ ಕಡೆಯಿಂದ ತಪ್ಪಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ" ಅಂತ.

Photo Courtesy : media.indiatimes.in