Friday 27 July 2012

ಆಯಸ್ಕಾಂತ

"ಈ ಮೊಬೈಲ್ ಅಲ್ಲಿ ಬ್ಯಾಟರಿನೆ ಇರಲ್ಲ ಗೇಮ್ ಆಡೋಣ ಅಂದ್ರೆ",
"ಲೋ! ಬ್ಯಾಟಲ್ ಫೀಲ್ಡ್ ಗೇಮ್ ಸಿ.ಡಿ. ಇದ್ರೆ ಕೊಡೋ ಆ ಗೇಮ್ ಆಡಿಲ್ಲ ನಾನು",
"ಒಂಥರಾ ಬೋರ್ ಹೊಡೀತಾ ಇದೆ ಕಣೆ! ಯಾವ್ದಾದ್ರು ಮೂವಿ ನೋಡೋಣ? ಟಿ.ವಿ. ಆನ್ ಮಾಡು, ಹೇಯ್! ಹ್ಯಾರಿ ಪಾಟರ್ ಬರ್ತಾ ಇದೆ ಕಣೆ. ಇರ್ಲಿ ಬಿಡು"
ಪೇಟೆಯಲ್ಲಿಯೇ ಹುಟ್ಟಿ, ಬೆಳೆದ ಅದೆಷ್ಟೋ ಸಣ್ಣ ಮಕ್ಕಳು ಇಷ್ಟು ಹೊತ್ತಿನ ತನಕ ಹೇಳಿದ ರೀತಿಲೇ ಮಾತಾಡ್ತಾ ಇರೋದನ್ನ ಕೇಳ್ತಾ ಇರ್ತೀವಿ. ಅದ್ಯಾಕೋ ಗೊತ್ತಿಲ್ಲ, ಕೆಲವು ಜನ ತಮ್ಮ ಮಕ್ಕಳಿಗೆ ಹೊರಗಡೆ ಹೋಗಿ ಆಟ ಆಡಲು ಬಿಡುವುದೇ ಇಲ್ಲ.
ಬಹುಷಃ ಅಂಥವರ ಮಕ್ಕಳಿಗೇ ಹೆಚ್ಚು ಬೋರ್ ಹೊಡೆಯುತ್ತೇನೋ?!!

ಅಂಥಾ ಸಮಯದಲ್ಲಿ..........

ನಿಮಗೆಲ್ಲ ಅದೆಷ್ಟು ನೆನಪಿದೆಯೋ ಗೊತ್ತಿಲ್ಲ ಆದರೆ ನಂಗೆ ಮಾತ್ರ ನಾ ಚಿಕ್ಕವನಿದ್ದಾಗ ಓದಿದ "ಬಾಲಮಂಗಳ", "ಗಿಳಿವಿಂಡು", "ಚಂಪಕ" ಪುಸ್ತಕಗಳು, ಅದರಲ್ಲಿ ಓದಿದ ಕೆಲವು ಕಥೆಗಳು ಇನ್ನೂ ನೆನಪಿದೆ.
ನಾವು ಕೂಗಿದರೂ ಬರ್ತಾನಾ ಅಂತ ನೋಡೋಕೆ "ಡಿಂಗಾಆ...ಆ...ಆ..ಆ" ಅಂತ  ಅದೆಷ್ಟು ಸಲ  ಕೂಗಿದೀವೋ ಗೊತ್ತಿಲ್ಲ.
ಅಮ್ಮ ಕೊಡೋ ಅವಲಕ್ಕಿಯನ್ನೋ, ಉಪ್ಪಿಟ್ಟನ್ನೋ  ಬಾಯಿಗೆ ಹಾಕಿಕೊಂಡು "ಶಕ್ತಿಮದ್ದು ತಿಂದೆ, ಇನ್ನು ನಂಗೆ ಶಕ್ತಿ ಬರುತ್ತೆ" ಅಂತ ಅದೆಷ್ಟು ಸಲ ಖುಷಿ ಪಟ್ಟಿದ್ದೀವೋ?
ಲಂಬೋದರನ ರೀತಿ ಅಂದುಕೊಂಡು ಅದೆಷ್ಟು ಸಲ ಚೆಂಡನ್ನು ಒದ್ದಿದ್ದೀವೋ?
ಫಕ್ರು "ಹಾರುವ ಪುಡಿಯನ್ನ" ಹಾಕಿದಂತೆ ರಂಗೋಲಿ ಪುಡಿಯನ್ನ ಗಿಡ, ಕಲ್ಲಿನ ಮೇಲೆ ಹಾಕಿ ಅದೂ ಹಾರುತ್ತಾ ಅಂತ ನೋಡಿಲ್ವಾ?

ಈ ಪುಸ್ತಕಗಳದ್ದು ಒಂದು ಕಥೆ ಆದ್ರೆ ನಾವು ಆಡ್ತಾ ಇದ್ದ ಆಟಗಳದ್ದು ಇನ್ನೊಂದು.
ಭೂತ ಕನ್ನಡಿ ಉಪಯೋಗಿಸಿ ಪೇಪರ್ ಸುಟ್ಟಿಲ್ವಾ ?

ತಲೆಗೆ ಎಣ್ಣೆ ಹಾಕಿ ಬಾಚಿಕೊಂಡು, ಬಾಚಣಿಗೆಯನ್ನು ಪೇಪರ್ ಚೂರುಗಳ ಮೇಲೆ ಹಿಡಿದು, ಆ ಚೂರುಗಳು ಬಾಚಣಿಗೆಗೆ ಅಂಟಿಕೊಳ್ಳೋದನ್ನ ನೋಡಿ, ನಾನು ಮ್ಯಾಜಿಕ್ ಮಾಡ್ದೆ ಅಂತ ಎಲ್ಲರಿಗೂ ಅದನ್ನ ತೋರಿಸಿಲ್ವ? 

ಔಷಧಿ ಬಾಟಲಿಯ ಮುಚ್ಚಲಕ್ಕೆ ತೂತು ಮಾಡಿ, ಒಂದು ಕಡ್ಡಿ, ರಬ್ಬರ್ ಬ್ಯಾಂಡ್ ಸಹಾಯದಿಂದ ಆ ಮುಚ್ಚಳ ಅದಾಗೇ ತಿರುಗೋ ಥರ ಮಾಡಿಲ್ವ?

ಕ್ಲಾಸ್ ಮುಗಿದ ಮೇಲೆ ಮಳೆ ಬರ್ತಾ ಇದ್ರೂ ಲೆಕ್ಕಿಸದೆ, ಅದೇ ಮಳೆಯಲ್ಲಿ ಗಂಟೆಗಟ್ಟಲೆ ಕ್ರಿಕೆಟ್, ವಾಲಿಬಾಲ್ ಆಡಿ ಮನೆಗೆ ಬಂದು ಬೈಸಿಕೊಂಡಿಲ್ವ?


ಆಯಸ್ಕಾಂತವನ್ನು ಮಣ್ಣಿನಲ್ಲಿ ಓಡಾಡಿಸಿ ಅದಕ್ಕೆ ಅಂಟಿಕೊಳ್ಳುವ ಕಪ್ಪು ಬಣ್ಣದ ಕಬ್ಬಿಣದ ಪುಡಿಯನ್ನ (ಅದು ಶುದ್ಧ ಕಬ್ಬಿಣದ ಪುಡಿಯೆಂದೆ ಆಗ ನಂಬಿದ್ವಿ ಬಿಡಿ) ಒಂದು ಕೊಟ್ಟೆಯಲ್ಲಿ ಶೇಖರಿಸಿ, ಕೆ.ಜಿ. ಗಟ್ಟಲೆ ತುಂಬಿ, ಆಮೇಲೆ ಅದನ್ನ ತೊಳೆದು ಅದರಲ್ಲಿರುವ ಮಣ್ಣಿನ ಕಣಗಳನ್ನ ಬೇರೆ ಮಾಡಿ ಇನ್ನೊಂದು ಸ್ವಲ್ಪ ತರೋಣ ಅಂತ ಮತ್ತೆ ಆಯಸ್ಕಾಂತವನ್ನು ಮಣ್ಣಿನಲ್ಲಿ ಓಡಾಡಿಸಿಲ್ವ? 

ಅದ್ಯಾರೋ ಆ ಕಬ್ಬಿಣದ ಪುಡಿಯನ್ನ ತೊಳೆದು ಉಂಡೆ ಕಟ್ಟಿ ಒಣಗಲು ಇಟ್ಟರೆ ಆ ಉಂಡೆಯೂ ಆಯಸ್ಕಾಂತ ಆಗುತ್ತೆ ಅಂತ ಹೇಳಿದ್ದಕ್ಕೆ, ಆ ಪ್ರಯತ್ನಾನೂ ಮಾಡಿಲ್ವಾ?


ನಿಮ್ಮ ಮಕ್ಕಳೂ ಅಯ್ಯೋ! ಬೇಜಾರು ಅಂತ ಹೇಳ್ತಾ ಇದ್ರೆ......

ಒಮ್ಮೆ ಯೋಚಿಸಿ ನೋಡಿ !



Photo Courtesy : Google !


~ ~ To view all the posts click on the Home Menu ~~