Friday 4 May 2012

ಚಿತ್ರಾನ್ನ ? ಬರ್ಗರ್ ?


ಹೌದು, ಹೌದು, ಹೌದು.
ಇಲ್ಲ ಇಲ್ಲ ಇಲ್ಲ .
ಇದ್ರೂ ಇರಬಹುದೇನೋ!
ಸುಮ್ಮನೆ ಇದೇ ಥರ ಗೊಂದಲದಲ್ಲಿ ಇಷ್ಟು ದಿನ ಕಳೆದೆನಲ್ಲ ಅಂತ ಬೇಜಾರೇನೂ ಇಲ್ಲ . ಆ ಥರ ಇದ್ದಿದ್ದಕ್ಕೆ ಇನ್ನು ಮೇಲೆ ಆ ಥರ ಇರಬಾರದು ಅಂತ ಗೊತ್ತಾಗಿದ್ದು ತಾನೆ ?
ಅವೆಲ್ಲಾ ಇರಲಿ ಈಗ ವಿಷಯಕ್ಕೆ ಬರೋಣ !

ಜೀವನವನ್ನು ಯಾವುದಕ್ಕೆ ಹೋಲಿಸಬಹುದು ?!
ಹಿಂದಿನ ಕಾಲದ ಜ್ಞಾನಿಗಳು ಜೀವನದ ಕಷ್ಟ ಸುಖಗಳನ್ನು ಹಗಲು/ರಾತ್ರಿಗೋ, ಹರಿಯುವ ನದಿಗೋ ಹೋಲಿಸಿದ್ದಾರೆ. ನಾನೂ ಒಬ್ಬ ಅಲ್ಪಜ್ಞಾನಿ ಅಥವಾ ಅಜ್ಞಾನಿ. ನನ್ನ ಪ್ರಕಾರ ಜೀವನ ಅಂದರೆ ನಾವು ತಿನ್ನೋ ಊಟದ ಥರ .
ಈ ತಿನ್ನುವುದರಲ್ಲೂ ಸಸ್ಯಾಹಾರ ,ಮಾಂಸಾಹಾರ , ಬೇಯಿಸಿದ್ದು, ಹಸಿ ತರಕಾರಿ ಅಂತೆಲ್ಲ ಇದ್ದರೂ ನನ್ನ ಪ್ರಕಾರ ಇರೋದು ಎರಡೇ ವಿಧ .
೧) ಇಷ್ಟಪಟ್ಟು ತಿನ್ನುವುದು.
೨) ಕಷ್ಟಪಟ್ಟು ತಿನ್ನುವುದು.

ನಾವೇನೋ ಮಾಡಬೇಕು ಅಂದುಕೊಂಡಿದ್ದರೆ ಅದನ್ನ ನಾವೇ ತಾನೆ ಮಾಡಬೇಕು? ಸುಮ್ಮನೆ ಡೈನಿಂಗ್ ಟೇಬಲ್ ಮುಂದೆ ಕೂತ್ಕೊಂಡು "ಅಯ್ಯೋ! ದಿನಾ ಬರೀ ಇದೇ ಚಿತ್ರಾನ್ನ" ಅಂತ ಕೊರಗುತ್ತಾ ಇದ್ರೆ ಏನೂ ಪ್ರಯೋಜನವಿಲ್ಲ . ಪಾನಿಪೂರಿನೋ, ಬರ್ಗರ್ ನೋ, ಮಸಾಲೆ ದೋಸೇನೋ ತಿನ್ನಬೇಕು ಅನ್ಸಿದ್ರೆ ನಾವೇ ಅಡಿಗೆ ಮನೆಗೆ ಹೋಗಿ ಅದನ್ನ ಮಾಡೋಕೆ ಪ್ರಯತ್ನಿಸಬಹುದು ತಾನೆ ? ಒಂದೇ ಸಲ ಚೆನ್ನಾಗಿ ಮಾಡೋಕೆ ಬರದೆ ಇದ್ರೂ ಮಾಡ್ತಾ ಮಾಡ್ತಾ ರುಚಿಯಾಗಿ ಮಾಡೋಕೆ ಬರುತ್ತೆ.

ಈಗ ಸಚಿನ್ ತೆಂಡುಲ್ಕರ್ ಮೊನ್ನೆ ಮೊನ್ನೆಯಷ್ಟೇ 100ನೇ  ಶತಕ ಹೊಡೆದರು. ಆದರೆ ಅವರು ಆಡಿರೋ ಪಂದ್ಯಗಳೆಷ್ಟು? 652 (ಏಪ್ರಿಲ್ 19 -2012 )! ಅಂದರೆ ಉಳಿದ ಪಂದ್ಯಗಳಲ್ಲಿ ಅವರು ಶತಕ ಬಾರಿಸಿಲ್ಲ! ಹಂಗಂತ ಅವರಿಗೆ ಕ್ರಿಕೆಟ್ ಆಡೋಕೆ ಬರೋದಿಲ್ಲ ಅನ್ನೋಕಾಗುತ್ತ ? ಈಗ ಅವ್ರು ಸೊನ್ನೆಗೆ ಔಟ್ ಆದ್ರೂ ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಆಡ್ತೀನಿ ಅಂದ್ಕೊಂಡಿದ್ದಕ್ಕೆ 100  ಶತಕ ಹೊಡೆದಿರೋದು!

ಕ್ರಿಕೆಟ್ ಹಂಗಿರಲಿ ಈಗ ಮತ್ತೆ ಊಟದ ವಿಷಯಕ್ಕೆ ಬರೋಣ!
ಒಂದು ಸಲ ಯೋಚನೆ ಮಾಡಿ, ನೀವು ಯಾವ ಥರ ಊಟ ಮಾಡ್ತಾ ಇದ್ದೀರಾ ಅಂತ. ನಿಮ್ಮ ಮುಂದೆ ಕೆಲವು ಆಯ್ಕೆಗಳಿವೆ.
1) ಡೈನಿಂಗ್ ಟೇಬಲ್ ಮುಂದೆ ಕೂತ್ಕೊಂಡು "ಅಯ್ಯೋ! ದಿನಾ ಬರೀ ಇದೇ ಚಿತ್ರಾನ್ನ" ಅಂತ ಕೊರಗುತ್ತಾ ಬೇರೆಯವರು ತಂದು ಕೊಡೋ ಅದೇ "ಚಿತ್ರಾನ್ನ"ವನ್ನೇ ತಿನ್ನುತ್ತಿದ್ದೇನೆ.
2) ಡೈನಿಂಗ್ ಟೇಬಲ್ ಮುಂದೆ ಕೂತ್ಕೊಂಡು "ಹೆಂಗಿದ್ರೂ ಯಾವುದೋ ಒಂದು ಕೊಡ್ತಾರೆ. ಯಾವ್ದಾದ್ರೆ ನನಗೇನು" ಅಂತ ಏನೂ ಸಿಗದೇ/ಕೊಡದೇ ಇದ್ರೂ ಖಾಲಿ ಹೊಟ್ಟೆಯಲ್ಲೇ ಇರ್ತೀನಿ.
3) "ಇಲ್ಲೇ ಇದ್ರೆ ಇದೇ ಚಿತ್ರಾನ್ನ ತಿನ್ನಬೇಕು" ಅಂತ ಹೊರಗೆ ಹೋಗಿ ಅಲ್ಲೇ ಏನೋ ತಿಂತೀನಿ. ಅಕಸ್ಮಾತ್ ದುಡ್ಡು ಖಾಲಿ ಆಯ್ತು ಅಂದ್ರೆ ಮನೆಗೆ ಬಂದು ಅದೇ ಚಿತ್ರಾನ್ನ ತಿಂತೀನಿ ಅಥವಾ ಖಾಲಿ ಹೊಟ್ಟೆಯಲ್ಲೇ ಇರ್ತೀನಿ.
4) "ಯಾರು ದಿನಾ ಇದೇ ಚಿತ್ರಾನ್ನ ತಿಂತಾರೆ" ಅಂತ ಅಡುಗೆಮನೆಗೆ ಹೋಗಿ ಮತ್ತೆ "ಅಯ್ಯೋ! ಬೇರೆ ಎಲ್ಲ ಮಾಡೋದು ಕಷ್ಟ" ಅಂತ ಅದೇ  ಚಿತ್ರಾನ್ನ ಮಾಡ್ಕೊಂಡು ತಿಂತೀನಿ.
5) "ನಾನು ಇವತ್ತು ಚಿತ್ರಾನ್ನ ತಿನ್ನಲ್ಲ" ಅನ್ಕೊಂಡು ಅಡುಗೆಮನೆಗೆ ಹೋಗಿ, ಬೇರೆ ಏನೋ ಒಂದು ಅಡುಗೆ ಮಾಡಿ, ರುಚಿ ನೋಡಿ, "ಥೂ! ನಂಗೆ ಬೇರೆ ಯಾವ್ದೂ ಮಾಡೋಕೆ ಬರೋಲ್ಲ" ಅಂತ ಮಾರನೆ ದಿನದಿಂದ ಮತ್ತದೇ ಚಿತ್ರಾನ್ನ ಮಾಡ್ಕೊಂಡು ತಿಂತೀನಿ.
6) ಮನೆಗೆ ಬರೋ ಮುಂಚೆನೇ ಬೇರೆಯವರ /ಬೇರೆ ಮೂಲದಿಂದ ಬೇರೆ ಬೇರೆ ಥರದ ಅಡುಗೆ ಮಾಡೋದು ಹೇಗೆ ಅಂತ ಕೇಳಿ/ನೋಡಿ ತಿಳ್ಕೊಂಡು, ಅದನ್ನು ಮನೆಯ ಅಡುಗೆಮನೆಯಲ್ಲಿ ತಯಾರಿಸಿ, ಚೆನ್ನಾಗಿರಲಿಲ್ಲ ಅಂದ್ರೆ ಯಾವ ಪದಾರ್ಥ ಕಡಿಮೆ/ಜಾಸ್ತಿ ಆಗಿತ್ತು ಅಂತ ತಿಳ್ಕೊಂಡು, ಮತ್ತೆ ಮತ್ತೆ ಅದನ್ನೇ ಮಾಡಿ "ಸೂಪರ್ ಆಗಿದೆ !" ಅಂತ ಹೇಳ್ತಾ ತಿಂತೀನಿ.

ನಾನು   ಆಗಲೇ ಹೇಳಿದ ಹಾಗೆ ಊಟದಲ್ಲಿ ಹೇಗೆ ಇಷ್ಟಪಟ್ಟು ತಿನ್ನುವುದು, ಕಷ್ಟಪಟ್ಟು ತಿನ್ನುವುದು ಅಂತ ಎರಡು ವಿಧಗಳು ಇವೆಯೋ ಅದೇ ರೀತಿ ನಾವು ಮಾಡೋ ಕೆಲಸದಲ್ಲೂ. ನಾವು ಇಷ್ಟ ಪಟ್ಟು ಮಾಡ್ತಾ ಇದೀವೋ, ಕಷ್ಟ ಪಟ್ಟು ಮಾಡ್ತಾ ಇದೀವೋ ಅನ್ನೋದಷ್ಟೇ ಮುಖ್ಯ .

ನಾನು ಏನು ಹೇಳೋಕೆ ಪ್ರಯತ್ನಿಸುತ್ತಾ ಇದೀನೋ ಅದು ನಿಮಗೆ ಅರ್ಥ ಆಗಿದೆ ಅನ್ಕೋತೀನಿ. ಆಗಿಲ್ಲ ಅಂದ್ರೆ "ಊಟ" ಪದ ಇರೋ ಜಾಗದಲ್ಲಿ "ಕೆಲಸ" ಪದವನ್ನೂ, "ಚಿತ್ರಾನ್ನ" ಪದ ಇರೋ ಜಾಗದಲ್ಲಿ "ಇಷ್ಟ ಇಲ್ಲದೆ ಮಾಡ್ತಾ ಇರೋ ಕೆಲಸ" ಪದವನ್ನೂ ಹಾಕಿ ಮತ್ತೊಮ್ಮೆ ಓದಿ.

ಯಪ್ಪಾ ದೇವ್ರೇ! ನಾನು ಇಷ್ಟು ಕೆಟ್ಟದಾಗಿ ಕೊರಿತೀನಿ ಅಂತ ಈಗಲೇ ಗೊತ್ತಾಗಿದ್ದು.
ಕೊನೆ ಮಾತು:-
ನಿಮಗೆ ಏನೇ ಕಷ್ಟ ಬಂದರೂ ಜಾಡಿಸಿ ಒದ್ದು ಡೈನಿಂಗ್ ಟೇಬಲ್ ಇಂದ ಮೇಲೆ ಏಳಿ, ಅಡುಗೆಮನೆಗೆ ಹೋಗಿ ನಿಮಗೆ ಏನು ಇಷ್ಟಾನೋ ಅದನ್ನು ಮಾಡ್ಕೊಂಡು ತಿನ್ನಿ!
ರುಚಿ  ಹೇಗಿದ್ರೆ ಚೆನ್ನ ಅಂತ ತಿಳ್ಕೊಳೋಕೆ ಬೇಕಾದ್ರೆ ಅಪರೂಪಕ್ಕೊಮ್ಮೆ ಹೋಟೆಲ್ ಕಡೆ ಹೋಗಿ ಬನ್ನಿ.


Photo Courtesy : Google ! 

~ ~ To view all the posts click on the Home Menu ~~