Friday 8 November 2013

ಕಲ್ಪನೆ - ನನ್ನ ಮೊದಲ ಹಾಡು

For those who can't read Kannada, this blog is all about my first ever composed song 'Kalpane'. You can watch the song at the end of this page :)

ಕಲ್ಪನೆ - ನನ್ನ ಮೊದಲ ಹಾಡು

ಏನಾದ್ರೂ ಒಂದು ಒಳ್ಳೇ ಕೆಲಸ ಮಾಡಬೇಕು ಅಂತ ಮಾಡಕ್ಕೋಗಿ, ಅದು ಇನ್ನೇನೋ ಆಗಿ ಇನ್ನೊಂದು ಥರದಲ್ಲಿ ಒಳ್ಳೇದು ಆಗತ್ತೆ ಅನ್ನೋದಕ್ಕೆ ಈ ಪುಂಗಿ ಮ್ಯೂಸಿಕ್ ಉದಾಹರಣೆ !!

ಇದೆಲ್ಲಾ ಶುರು ಆಗಿದ್ದು 'ಲೈಫು ಇಷ್ಟೇನೆ' ಚಿತ್ರದ 'ಯಾರಿಗ್ ಹೇಳಣ' ಹಾಡು ಕೇಳಿದ ಮೇಲೆ.
ಆ ಹಾಡು ಸ್ವಲ್ಪ ನಮ್ಮ ಕಥೆ ಥರಾನೆ ಇದ್ಯಲ್ಲ, ಅದೇ ರಾಗಕ್ಕೆ ನಾನೂ ಯಾಕೆ ಹಾಡು ಬರೆಯೋಕೆ ಪ್ರಯತ್ನಿಸಬಾರದು ಅಂತ ಹಾಡು ಬರೆದು ನನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ನನ್ನ ಸ್ನೇಹಿತರಿಗೆಲ್ಲ ಕೇಳಿಸುತ್ತಿದ್ದೆ. ಅದೇ ಥರ ನಮ್ ಮಂಗ ಮುರಳಿಗೂ ಹಾಡು ಕೇಳಿಸಿದಾಗ, ಅವನು "ಲೇಯ್! ಈ ಹಾಡನ್ನ ಯಾಕೆ ಯೂಟ್ಯೂಬ್ ನಲ್ಲಿ ಹಾಕಬಾರದು? ನಮ್ಮ ಮನೆಗೆ ಬಾ, ಸುಮ್ನೆ ಒಂದು ಫೋಟೊ ಹಾಕಿ ಈ ಹಾಡನ್ನ ಹಾಕಣ" ಅಂದ.
ಹಾಗೇ ಹಾಕ್ತಾ ಕೊನೇಲಿ ಸುಮ್ನೆ 'ಕನ್ನಡ ಕಲಿತು ರೆಡಿ ಆಗಿರಿ, ಸದ್ಯದಲ್ಲೇ ಇನ್ನೊಂದು ಹಾಡು ಬರಲಿದೆ' ಅಂತ ಹಾಕಿದ್ವಿ, ಆಗ ಯಾವ ಹಾಡೂ ಬರೆದಿರದಿದ್ರೂ !

ಅದಾಗಿ ಒಂದು ತಿಂಗಳಿಗೆ 'ಸಿದ್ಲಿಂಗು' ಚಿತ್ರದ 'ಎಲ್ಲೆಲ್ಲೊ ಓಡುವ ಮನಸೆ' ಹಾಡಿಗೆ ಬೇರೆ ಸಾಹಿತ್ಯ ಬರೆದೆ. 
ಹಿಂದಿನ ಹಾಡಿಗೆ ಕೆಲವೊಂದಷ್ಟು ಪದಗಳನ್ನು ಒರಿಜಿನಲ್ ಹಾಡಿನಲ್ಲಿದ್ದುದನ್ನೆ ಬಳಸಿದ್ದರಿಂದ ಈ ಸಲ ಅಷ್ಟೂ ಸಾಹಿತ್ಯ ಬದಲಾಯಿಸಲಾಯಿತು. ಅಷ್ಟಲ್ಲದೆ ಈ ಸಲ ಬರೀ ಒಂದು ಫೋಟೊ ಹಾಕೋದು ಬೇಡ ಅಂತ, ಒಂದಷ್ಟು ಫೋಟೊಗಳ ಜೊತೆ ಹಾಡಿನ ಸಾಹಿತ್ಯವನ್ನೂ ಸೇರಿಸಿದ್ದು ವೀಡಿಯೋ ಮಟ್ಟಿಗೆ ಎಲ್ಲರೂ ನೋಡಬಹುದು ಎನ್ನುವಷ್ಟಿತ್ತು.

ಯಾವುದಕ್ಕೂ ಈ ಹಾಡುಗಳೆಲ್ಲಾ ಒಂದೇ ಸೂರಿನಡಿಯಲ್ಲಿರಲಿ ಅಂತ ನಾವು ಮಾಡೋ ಈ ಅರ್ಥವಿಲ್ಲದ ಕೆಲಸಗಳಿಗೆ 'ಪುಂಗಿ ಮ್ಯೂಸಿಕ್' ಅಂತ ಹೆಸರಿಟ್ಟಿದ್ದೇವೆ. 

ಹೀಗೆ ಬರೀ ಬೇರೆ ಹಳೇ ರಾಗಕ್ಕೆ ಹೊಸ ಸಾಹಿತ್ಯ ಬರೆಯೋದು, ಒಂದಷ್ಟು ಫೋಟೋಗಳನ್ನು ಹಾಕೋದು ಇಷ್ಟಲ್ಲದೆ ಹೊಸತೇನಾದರೂ ಮಾಡೋಣ ಅಂತ ಈ ಸಲ ಹಾಡು ಬರೆದು, ಅದಕ್ಕೆ ರಾಗ ಹಾಕಿ, ಸಂಗೀತವನ್ನೂ ಕೊಡಲು ಪ್ರಯತ್ನಿಸಿದ್ದೇನೆ.
ನೋಡಿ, ಇಷ್ಟ ಆದ್ರೆ ಲೈಕ್ ಮಾಡಿ ಚೆನಾಗಿಲ್ಲ ಅಂದ್ರೆ ಯಾವುದೇ ಮುಲಾಜಿಲ್ಲದೆ ಬೈದುಬಿಡಿ :)


ಸಾಹಿತ್ಯ 

ಕವನ

ಆ ನಿನ್ನ ತಿಳಿನೀಲಿ, ಕಿವಿಯ ಓಲೆಯಲ್ಲಿ
ಜೋಕಾಲಿ ಆಡುವಾ ಮನಸಾಗಿದೆ.
ನನಗೊಂದು ಖಯಾಲಿ, ನಿನ ಕೆನ್ನೆ ಗುಳಿಯಲ್ಲಿ
ನೀರ್ತುಂಬಿ ಈಜೋಣವೆಂದೆನಿಸಿದೆ.
ಚಳಿಗಾಳಿ ಬೀಸ್ತಿದ್ರೂ, ಫ್ಯಾನ್ ಸ್ಪೀಡು ಐದಿದ್ರೂ
ಹೊದಿಕೆಯಾ ಸರಿಸುತಿದೆ ನಿನ್ನ ಬಿಸಿ ನೆನಪು.
ನೀ ನನಗೆ ಬೈದರೂ, ಮಳೆ ಸಿಡಿಲೇ ಬಂದರೂ
ಛತ್ರಿಯಾ ಹಿಡಿಯೋಕೆ ನನಗಿಲ್ಲ ಹುರುಪು.
ಇಷ್ಟೆಲ್ಲ ಹೊಗಳೋಕೆ,
ನೀನೇನು ಅಪ್ಸರೆಯೋ?
ಭೋರ್ಗರೆವ ಸಾಗರವೋ?
ನನ ಮುಖದ ಮೊಡವೆಯೋ?
ಅತಿ ಮಧುರ ರಾಗವೋ?
ಅಥವಾ ನೀನೆಂಬ ನೀನು ಬರೀ ನನ್ನ ಕಲ್ಪನೆಯೋ?!

ಹಾಡು

ಬರೆಯುವೆ ಎಂದು ಬರೆಯಲು ಕುಳಿತೆ, ಪದಗಳಾ ಸುಳಿವಿಲ್ಲಾ 
ನಿನ್ನದೇ ಮೊಗವೆಲ್ಲ.
ನಿನ್ನಯಾ ನೋಟದಿ ನನ್ನನೇ ಮರೆತೆ, ಹಾಡನೂ ಮರೆತಿಲ್ಲ 
ನಿನ್ನದೇ ಸ್ವರವೆಲ್ಲ
ಬೆಳಕೇ ಇಲ್ಲದೇ ನೋಡಲು ಸಾಧ್ಯವೇ?
ನೀಡಿದೇ ನೋಟ ನಿನ್ನಯ ಅಂದವೇ

ಹರಿಯುವ ನೀರು ಜುಳುಜುಳು ಎನದೆ ಹೇಳಿತು ನಿನ್ನಯ ಹೆಸರನ್ನೆ 
ತಣ್ಣನೆ ರಾತ್ರಿ ನಿದ್ದೆಯು ಬರದೆ ಕಾಡಿತು ನಿನ್ನದೆ ಕಣ್ಸನ್ನೆ
ತಿಳಿಯದ ನೆಪದಲಿ ಚಂದ್ರನ ಮರೆಯಲಿ ನಿನ್ನಯ ಪಾಡಿಗೆ ನಗುತಿರಲು 
ಬೆಳಕಿನ ವೇಗದಿ ಓಡಿದೆ ಮನವು ನಿನ್ನದೆ ನಗುವನು ಬರೆದಿಡಲು
ಲೇಖನಿ ಇರದೇ ಗೀಚಲು ಸಾಧ್ಯವೇ?
ಬರೆಸಿದೆ ಕವಿತೆ ನಿನ್ನಯ ನಗುವೇ || ಪ ||

ಹೇಳಲೆ ಎಂದು ಕೇಳಿದೆ ತುಟಿಯು ನನ್ನಯ ಮನದಾ ಬರವಣಿಗೆ
ತಡೆಯಲೆ ಬೇಡ ಎನ್ನುತ ಕನಸು ಹೊರಟಿದೆ ನಿನ್ನೆಡೆ ಮೆರವಣಿಗೆ
ನಿನ್ನಯ ಸ್ಪರ್ಶಕೆ ಸೋಲುವ ನಾನು ನೀನಿರೆ ಗೆಲ್ಲುವೆ ಜಗವನ್ನೆ
ಕನಸಿನ  ಪಯಣಕೆ ಹೊರಟರೆ ನೀನು ಸುರಿಸುವೆ ಬಣ್ಣದ ಮಳೆಯನ್ನೆ
ಮೋಡವೇ ಇರದೇ ಮಳೆಯೂ ಸಾಧ್ಯವೇ?
ಸುರಿಸಿದೆ  ಮಳೆಯ ನಿನ್ನಯ ಸ್ಪರ್ಶವೇ || ಪ ||


Monday 7 October 2013

ಶಿಕ್ಷಕರಿಗೊಂದು ಸೆಲ್ಯೂಟ್

೭-೧೦-೨೦೧೩ ರ ಪಂಜು ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ
http://www.panjumagazine.com/?p=4499

~ ಶಿಕ್ಷಕರಿಗೊಂದು ಸೆಲ್ಯೂಟ್ ~

ಶಿಕ್ಷಕರು ಅಂದ್ರೆ ದೇವರಿದ್ದಂತೆ, ಶಿಕ್ಷಕರು ಎಷ್ಟು ಒಳ್ಳೆಯವರಾಗಿರ್ತಾರೋ ಅವರ ವಿದ್ಯಾರ್ಥಿಗಳೂ ಅಷ್ಟೇ ಒಳ್ಳೆಯವರಾಗಿರ್ತಾರೆ ಅಂತೆಲ್ಲಾ ಕೊರೀತಾ ಕೂತ್ರೆ ಒಂದು ನಕ್ಷತ್ರ ಹುಟ್ಟಿ ಅದು ಕಪ್ಪು ರಂಧ್ರ ಸ್ಥಿತಿ ತಲುಪುವವರೆಗೂ ಕೊರೀಬಹುದು. ಇಂಥವೆಲ್ಲಾ ಬಿಟ್ಟು ಬೇರೆ ಏನಾದ್ರೂ ಹೇಳೋಣಾ ಅಂದ್ರೆ ಅವರನ್ನು ಬಯ್ಯೋದೋ, ಹೊಗಳೋದೋ ಅಥವಾ ಹೀಗೇ ನೆನಪು ಮಾಡ್ಕೊಳ್ತಾ ಇರೋದೋ ಗೊತ್ತಾಗ್ತಿಲ್ಲ.

ಒಂದು ಕಡೆಯಿಂದ ಶುರು ಮಾಡುವುದಾದರೆ ನಾವೆಲ್ಲಾ ಅಂಗನವಾಡಿ ಅಥವಾ ಶಿಶುವಾರಕ್ಕೆ ಹೋಗುವಾಗ ಅಲ್ಲಿದ್ದ ಲಕ್ಷ್ಮೀದೇವಿ ಟೀಚರ್ ನಮ್ಮಂಥ ಚಿಕ್ಕ ಮ(೦ಗಗ)ಕ್ಕಳ ಗುಂಪನ್ನು ಹೇಗೆ ಸಹಿಸಿಕೊಳ್ತಿದ್ರೋ ನಾ ಕಾಣೆ. ಇವತ್ತಿಗೂ ಸಿಕ್ಕಿದಾಗ "ಹೇಗಿದ್ಯಪ್ಪಾ? ಏನ್ ಮಾಡ್ತಾ ಇದೀಯ ಈಗ? ಅಪ್ಪ, ಅಮ್ಮ ಚೆನಾಗಿದಾರ?" ಅಂತ ನೂರೆಂಟು ಪ್ರಶ್ನೆ ಕೇಳೋ ಲಕ್ಷ್ಮೀದೇವಿ ಟೀಚರ್ ನಾ ಚಿಕ್ಕವನಿದ್ದಾಗ ಅತ್ತರೆ ಸಮಾಧಾನ ಮಾಡಿ, ತಪ್ಪು ಮಾಡಿದಾಗ ನನ್ನಂಡಿನ ಮೇಲೆ ನಾಲ್ಕು ಬಾರಿಸಿ ಕೂರಿಸುತ್ತಿದ್ದರೇನೋ!

ಇನ್ನು ನಾಲ್ಕನೇ ತರಗತಿಯವರೆಗೆ ಕಲಿಸಿದ ಶಂಕ್ರಯ್ಯ ಮಾಷ್ಟ್ರು, ಆರತಿ ಟೀಚರ್ ಈಗಲೂ ಆಗಾಗ ಕನಸಲ್ಲಿ ಕೋಲು ಹಿಡ್ಕೊಂಡು ಕಾಣಿಸುತ್ತಾರೆ. ಇತ್ತೀಚೆಗೆ ಸಿಕ್ಕಾಗ ನೋಡಿದಂತೆ ಆರತಿ ಟೀಚರ್ ಆಗಿಗಿಂತ ಸ್ವಲ್ಪ ದಪ್ಪ ಆದಂತೆ ಕಂಡರೂ ನಮ್ಮ ಶಂಕ್ರಯ್ಯ ಮಾಷ್ಟ್ರು ಮಾತ್ರ ಹಾಗೇ ಇದಾರೆ. ಒಂದೇ ಬದಲಾವಣೆ ಅಂದ್ರೆ ಅವರು ಸ್ಟೈಲಾಗಿ ತೆಗೀತಾ ಇದ್ದ ತಲೆಕೂದಲ ಸೈಡ್ ಕ್ರಾಪಿನಲ್ಲಿ ಅಲ್ಲಲ್ಲಿ ಒಂದೆರಡು ಬಿಳಿ ಕೂದಲು ಕಾಣುತ್ತಿವೆಯಷ್ಟೆ. ಅದ್ಯಾಕೋ ಆಗ ಶಿಕ್ಷಕರು ಗಂಡಸಾಗಿದ್ದರೆ 'ಸರ್' ಅಂತಲೂ ಹೆಂಗಸಾಗಿದ್ದರೆ 'ಟೀಚರ್' ಅಂತಲೂ ಕರೆಯಬೇಕೆಂದುಕೊಂಡಿದ್ದೆವು. ಕ್ಲಾಸಿನಲ್ಲಿ ಎರಡು ನಿಮಿಷಕ್ಕೊಬ್ಬರಂತೆ ಎದ್ದು 'ಒಂದಕ್ಕೆ ಹೋಗದಾ ಸಾ…/ಟೀಚಾ…' ಅಂತ ಕೇಳಿ ಬೈಸಿಕೊಂಡಿದ್ದು ಈಗ ಒಂಥರಾ ಮಜಾ ಅನ್ನಿಸ್ತಿದೆ!
ಐದರಿಂದ ಏಳರವರೆಗೆ ಓದಿದ ಸ್ಕೂಲಿನಲ್ಲಿ ಬಹಳಷ್ಟು ಜನ ಶಿಕ್ಷಕರಿದ್ದರು. ಆದಷ್ಟು ಜನರನ್ನ ನೆನಪು ಮಾಡ್ಕೊಳ್ಳೋಕೆ ಪ್ರಯತ್ನ ಮಾಡ್ತೀನಿ. ಕನ್ನಡಕ ಹಾಕ್ಕೊತಾ ಇದ್ದ ರೋಜಾಮಣಿ ಟೀಚರ್. ನನ್ನ ಕ್ಲೋಸ್ ಫ್ರೆಂಡಿನ ತಂದೆ ಚನ್ನಕೇಶವ ಮೇಷ್ಟ್ರು. 'ತಪ್ಪಾ ಮಾಡಿದ ಮ್ಯಾಲೆ, ಶಿಕ್ಷೆ ಅನುಭವಿಸಲೇ ಬೇಕು' ಅಂತ ಹೇಳ್ತಾ ಸಿಕ್ಕಾಪಟ್ಟೆ ಹೊಡೀತಾ ಇದ್ದ ಗೋಪಾಲ್ ಮಾಷ್ಟ್ರು. ಬೆಲ್ ಹೊಡೆದ ಕೂಡ್ಲೇ 'ಕನ್ನಡದಾ ಮಕ್ಕಳೆಲ್ಲ ಒಂದಕ್ಕೋಗಿ ಬನ್ನಿ' ಅಂತ ರಾಗವಾಗಿ ಹೇಳಿ ಹೊರಗೆ ಕಳಿಸುತ್ತಿದ್ದ ಓಂಕಾರಪ್ಪ ಮಾಷ್ಟ್ರು. ಶಾಲೆಯಲ್ಲಿ ಯಾವುದೇ ಸಮಾರಂಭ ಇದ್ದರೂ ಹಾಡು, ಡ್ಯಾನ್ಸ್, ನಾಟಕ, ಭಾಷಣ ಎಲ್ಲಾ ಹೇಳಿ ಕೊಟ್ಟು ಸಮಾರಂಭಕ್ಕೆ ಡ್ರೆಸ್ ಮಾಡಿಸಿ ಕಳಿಸುತ್ತಿದ್ದ ನಾಗರತ್ನ ಟೀಚರ್, ಶೈಲಜಾ ಟೀಚರ್. ನಮಗೆಲ್ಲ ಖೋ ಖೋ, ಕಬಡ್ಡಿ, ವಾಲಿಬಾಲ್, ಅದೂ, ಇದೂ, ಮತ್ತೊಂದು ಅಂತ ನಮಗೆ ಗೊತ್ತಿಲ್ದೇ ಇರೋ ಆಟವನ್ನೆಲ್ಲ ಕಲಿಸಿದ ರೇವತಿ ಟೀಚರ್. ಹೆಡ್ ಮಾಷ್ಟ್ರ ಕುರ್ಚಿಯಲ್ಲಿ ಕೂರುವ, ರೂಲರ್ ದೊಣ್ಣೆಯಲ್ಲಿ ಮಾತ್ರ ಹೊಡೆಯುವ ನಾಗರಾಜ್ ಮೇಷ್ಟ್ರು. ಇದೇ ರೀತಿ ಹೈಸ್ಕೂಲು, ಕಾಲೇಜಿನ ಶಿಕ್ಷಕರನ್ನೆಲ್ಲಾ ನೆನಪಿಸಿಕೊಂಡರೆ ನಮ್ಮ ಭೂಮಿಯ ಮೇಲಿರೋ ಜನಸಂಖ್ಯೆಯಷ್ಟು ನೆನಪುಗಳು ತಲೆಗೆ ಬರ್ತವೆ.

ಇನ್ನು ಇವೆಲ್ಲಾ ಶಾಲೆಗಳಲ್ಲೂ ಇದ್ದ ಸಾಮ್ಯತೆ ಏನಪ್ಪಾ ಅಂದ್ರೆ, ಶಿಕ್ಷಕರ ದಿನಾಚರಣೆಯ ಎರಡ್ಮೂರು ದಿನ ಮೊದಲು ನಮಗೆಲ್ಲಾ ಕೊಡ್ತಾ ಇದ್ದ ಡಾ. ರಾಧಾಕೃಷ್ಣನ್ ಅವರ ಭಾವಚಿತ್ರವಿರುವ ಸ್ಟಿಕ್ಕರ್! ಒಂದೋ ಎರಡೋ ರೂಪಾಯಿ ಇರುತ್ತಿದ್ದ ಆ ಸ್ಟಿಕ್ಕರನ್ನು ನಮ್ಮ ನೋಟ್ ಬುಕ್ಕು, ಜಾಮಿಟ್ರಿ, ಬ್ಯಾಗಿನ ಮೇಲೆಲ್ಲಾದರೂ ಅಂಟಿಸಿಕೊಳ್ತಾ ಇದ್ವಿ.

ನೀವು ಏನೇ ಹೇಳಿ, ಈ ಶಿಕ್ಷಕರು ಮಾಡೋ ಕೆಲಸ, ಅವರಿಗಿರುವ ತಾಳ್ಮೆ ಅಷ್ಟಿಷ್ಟಲ್ಲ. ತನ್ನ ವಿದ್ಯಾರ್ಥಿ ಗೆಲ್ಲಲಿ ಅಂತ ಶಿಕ್ಷಕರು ಪಡುವ ಶ್ರಮ ಬಹುಶಃ ಕೆಲವು ತಂದೆ ತಾಯಂದಿರೂ ಪಟ್ಟಿರಲಾರ್ರು. ಇವತ್ತು ನಾನು ಏನೋ ಬರೆದಿದ್ದೀನಿ, ನೀವು ಏನೋ ಓದ್ತಿದೀರಿ ಅಂದ್ರೆ ಅದಕ್ಕೆಲ್ಲ ನಮಗೆ ಇಲ್ಲಿಯ ತನಕ ಕಲಿಸಿದ, ಇನ್ನೂ ಕಲಿಸುತ್ತಿರುವ, ಮುಂದೆಯೂ ಕಲಿಸುವ ನಮ್ಮೆಲ್ಲ ಶಿಕ್ಷಕರೇ ಕಾರಣ.

ನಮ್ಮ ಶಿಕ್ಷಕರು ನಾವು ತಪ್ಪು ಮಾಡಿದಾಗ ಬೈದಿದ್ದಾರೆ, ಹೊಡೆದಿದ್ದಾರೆ, ನಮ್ಮ ಕಿವಿ ಹಿಂಡಿದ್ದಾರೆ. ನಾವು ಒಳ್ಳೇ ಮಾರ್ಕ್ಸ್ ತೆಗೆದಾಗಲೋ, ಚೆನ್ನಾಗಿ ಭಾಷಣ ಮಾಡಿದಾಗಲೋ, ಚೆನ್ನಾಗಿ ಆಟವಾಡಿದಾಗಲೋ ನಮಗೆ ಶಭಾಷ್ ಹೇಳಿ ಉಳಿದವರ ಎದುರಿಗೆ ಹೊಗಳಿ ಚಪ್ಪಾಳೆ ತಟ್ಟಿಸಿದ್ದಾರೆ. ಪುರಸೊತ್ತಾದಾಗೆಲ್ಲಾ ಆ ನಮ್ಮ ಶಿಕ್ಷಕರನ್ನ ನೆನಪು ಮಾಡ್ಕೊತಾ ಇರೋಣ. ನಾವು ನಾವಾಗಲು ಕಾರಣರಾದ ನಮ್ಮ ಎಲ್ಲಾ ಶಿಕ್ಷಕರಿಗೆ ಕೈ ಎತ್ತಿ ತಲೆಯ ಮೇಲಿಟ್ಟು ಒಂದು ಸೆಲ್ಯೂಟ್ ಮಾಡೋಣ.

Monday 1 July 2013

ದದ್ದ ಬೂಗು ಕಟ್ಟಿದಾಗ !

ಜುಲೈ-1-2013ರ 'ಪಂಜು' ಅಂತರ್ಜಾಲ ವಾರ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ !

ದದ್ದ ಬೂಗು ಕಟ್ಟಿದಾಗ !

ಹೊರಗಿನಿಂದ ಬರುತ್ತಿದ್ದ ಗಾಳಿಗೋ, ರೂಮಿನಲ್ಲಿ ತಿರುಗುತ್ತಿದ್ದ ಫ್ಯಾನ್ ಗಾಳಿಗೋ ಗೊತ್ತಿಲ್ಲ; ಗೋಡೆಗೆ ನೇತುಹಾಕಿದ್ದ ಕ್ಯಾಲೆಂಡರ್ ಆಚೀಚೆ ಅಲ್ಲಾಡುತ್ತಾ ಶಬ್ದ ಮಾಡುತ್ತಿತ್ತು. ಸಾಮಾನ್ಯವಾಗಿ ನನಗೆ ಮಲಗಿದ ಹತ್ತು-ಹದಿನೈದು ನಿಮಿಷಕ್ಕೆಲ್ಲಾ ನಿದ್ದೆ ಬರ್ತಿತ್ತು. ಇವತ್ತು ಹನ್ನೆರಡು ಘಂಟೆ ಆದ್ರೂ ನಿದ್ದೆ ಬರದೆ ಆಚೀಚೆ ಹೊರಳಾಡ್ತಾ ಇದ್ದ ನನ್ನನ್ನ ನೋಡಿ ಪಕ್ಕದಲ್ಲಿದ್ದ ರೂಮ್ ಮೇಟ್ ಕೇಳ್ದ.
"ಯಾಕೋ? ಇನ್ನೂ ನಿದ್ದೆ ಬಂದಿಲ್ವಾ?"
"ಇಲ್ಲಾ ಕಡೋ, ಬೂಗು ಕಟ್ಟಿದೆ" ಅಂದೆ.
"ಏನು?! ಏನು ಕಟ್ಟಿದೆ?" ಜೋರಾಗಿ ನಗುತ್ತಾ ಮತ್ತೆ ಕೇಳಿದ.
"ಬೂಗು! ಕಡೋ ಬೂಗು!" ಅಂದೆ.
ಇನ್ನೂ ಜೋರಾಗಿ ನಗುತ್ತಾ "ಮೂಗು ಅಂತ ಹೇಳೋಕೂ ಆಗ್ತಿಲ್ವಲೋ ನಿಂಗೆ! ಅಲ್ಲಿ ಶೋಕೇಸಲ್ಲಿ ವಿಕ್ಸ್ ಇದೆ, ಹಚ್ಕೊಂಡು ಮಲ್ಗು" ಅಂದ.
ನಾನು ಎದ್ದು ಹೋಗಿ ವಿಕ್ಸ್ ತಗೊಂಡು ಹಚ್ಕೋತಾ ಮಲಗಿದೆ. ಅವ್ನಿನ್ನೂ ನಗ್ತಾನೆ ಇದ್ದ.
ನಾನು "ಉಸಿರಾಡೋಕೆ ಆಗಲ್ಲ ಅತ್ತ ದಾದಿದ್ರೆ ದಿಗ್ಗೆ ದಗು ಅಲ್ವಾ" ಅಂದೆ.
ನನ್ನ ಮಾತು ಕೇಳಿ ಅವ್ನ ನಗು ಇನ್ನೂ ಜೋರಾಯ್ತು! "ಆಯ್ತು ಮಾರಾಯ! ವಿಕ್ಸ್ ಸ್ವಲ್ಪ ಜಾಸ್ತೀನೇ ಹಚ್ಕೊಂಡು ಮಲ್ಗು, ಬೆಳಿಗ್ಗೆ ಸರಿ ಆಗತ್ತೆ. ಗುಡ್ ನೈಟ್" ಅನ್ನುತ್ತಾ ಆಚೆ ತಿರುಗಿ ಮಲಗಿದ.
ವಿಕ್ಸ್ ಹಚ್ಚಿಕೊಂಡ ಕೆಲಹೊತ್ತು ಸರಿಯಾಗೇ ಉಸಿರಾಡಿದೆ, ಆಮೇಲೆ ಮತ್ತದೇ ಗೋಳು. ಬೆಳಗಿನ ತನಕಾನೂ 'ಸೊರ್' 'ಸೊರ್' ಅಂತಾನೇ ಇದ್ದೆ.

ಬೆಳಿಗ್ಗೆ ಎದ್ದು ಬಿಸಿಬಿಸಿ ನೀರಿನ ಸ್ನಾನವಾದ ಮೇಲೆ ಸ್ವಲ್ಪ ಸಮಾಧಾನವೇನೋ ಆಯ್ತು. ಆದ್ರೆ ಆಮೇಲೆ ಬಸ್ಸಲ್ಲಿ ನನ್ನ ಫ್ರೆಂಡಿನ ಮದುವೆಗೆ ಅಂತ ಹೋಗುವಾಗ ಬೀಸಿದ ಗಾಳಿಗೆ ಮತ್ತೆ ನನ್ನ ಮೂಗಿನಲ್ಲಿ 'ಲಾವಾರಸ' ಉಕ್ಕಿ ಹರಿಯಲಾಗದ ಸ್ಥಿತಿಯಲ್ಲಿ ತುಂಬಿಕೊಂಡಿತ್ತು!

ನನ್ನ ಕ್ಲಾಸ್ ಮೇಟ್ ಮದುವೆಗೆ ನಮ್ಮ ಒಂದಷ್ಟು ಜನ ಫ್ರೆಂಡ್ಸ್ ಬಂದಿದ್ರು. ಎಲ್ಲರೂ ಮಾತಾಡ್ತಾ ಹಾಗೇ ಅಂತ್ಯಾಕ್ಷರಿ ಆಡೋಣ ಅಂತ ತೀರ್ಮಾನವಾಯ್ತು. ಹಾಗೇ ಆಡ್ತಾ ನಾನಿದ್ದ ತಂಡಕ್ಕೆ 'ಮ' ಅಕ್ಷರ ಬಂತು. ನಂಗೆ ಹಾಡು ನೆನಪಾಗಿ ಹಾಡೋಕೆ ಶುರು ಮಾಡ್ದೆ.
"ಬಿಚ್ಚಾಗಿ ದೀದು ಬರಲು, ದಿತ್ತಲ್ಲಿಯೇ ಬಳೆಗಾಲ!"
ಅಷ್ಟೆ! ಎಲ್ರೂ ಜೋರಾಗಿ ನಕ್ಕಿದ್ದಲ್ದೆ ಆಮೇಲೆ ಎಲ್ಲಾ ಹಾಡುಗಳನ್ನ ಅವರವರ ಮೂಗು ಹಿಡಿದುಕೊಂಡು ಹಾಡಿದ್ರು.

ಮಾತು ನೆಗಡಿಯ ಕಡೆ ತಿರುಗಿದ್ರಿಂದ ಒಬ್ಬ ಅವನ ಸ್ಕೂಲಿನಲ್ಲಿ ಆದ ಘಟನೆ ಹೇಳಿದ.
"ನಾನು ಎರಡನೇ ಕ್ಲಾಸಿಗೆ ಹೋಗ್ತಿರ್ಬೇಕಾದ್ರೆ ಒಬ್ಬ ನನ್ನ ಪಕ್ಕ ಕೂರ್ತಿದ್ದ, ಅವನ ಹೆಸ್ರು ಈಗ ನಂಗೆ ನೆನಪಿಲ್ಲ. ಅವನ ಮೂಗು ಯಾವಾಗ್ಲೂ ಸೋರ್ತಾ ಇರ್ತಿತ್ತು. ಅವನು ಎಷ್ಟು ಕೊಳಕ ಅಂದ್ರೆ ಅವನ ಮೂಗಿಂದ ಸೋರುತ್ತಿದ್ದ ಸಿಂಬಳಾನ ವರೆಸಿಕೊಳ್ತಾನೇ ಇರ್ಲಿಲ್ಲ! ಕೆಲವು ಸಲಾನಂತೂ ಅದು ಸೀದ ಅವನ ಬಾಯಿಯ ಒಳಗೂ ಹೋಗ್ತಿತ್ತು !" ಅಂದ.
ನಾನು ಅನ್ಕೊಂಡ ಹಾಗೇ ನನ್ನನ್ನ ಆ ಸಿಂಬಳದ ಹುಡುಗನ ಜೊತೆ ಹೋಲಿಕೆ ಮಾಡಿ ಒಂದಷ್ಟು ಜೋಕುಗಳು ನಮ್ಮ ಮಧ್ಯೆ ಓಡಾಡಿದ್ವು.

ಮದುವೆ ಮುಗಿಸಿ ಮನೆಗೆ ಬಂದವ್ನೇ ಅದ್ಯಾರೋ ಹೇಳಿದ್ದ ನೆಗಡಿ ಸರಿಮಾಡುವ 'ಟ್ಯಾಬ್ಲೆಟ್' ತಂದು ತಿಂದೆ.
ಇನ್ನೆಲ್ಲೋ ಓದಿದ್ರಿಂದ ಒಂದು ಪಾತ್ರೆ ಬಿಸಿನೀರಿಗೆ ವಿಕ್ಸ್ ಹಾಕಿ, ತಲೆ ಮೇಲೆ ಟವೆಲ್ ಹಾಕಿಕೊಂಡು ಪಾತ್ರೆ ಜೊತೆಗೆ 'ಗುಮ್ಮ' ಹಾಕಿಕೊಂಡೆ.
ಮನೆಗೆ ಫೋನ್ ಮಾಡಿದಾಗ ಅಮ್ಮ ಹೇಳಿದ ಹಾಗೆ 'ಕಷಾಯ' ಮಾಡಿ ಕುಡಿದೆ.
ಅಪ್ಪ ಹೇಳಿದ 'ಕಾಫ್ ಸಿರಪ್', 
ಇನ್ಯಾರೋ ಹೇಳಿದ 'ಈರುಳ್ಳಿ-ಬೆಲ್ಲ', 
ಇನ್ನೆಂಥದೋ ಜೇನುತುಪ್ಪದೊಂದಿಗೆ ನೆಕ್ಕುವ ಪುಡಿ.
ಈ ಎಲ್ಲಾ ಔಷಧಿ ಮಾಡಿದ್ರೂ ಮತ್ತೆರಡು ದಿನ ನನ್ನ 'ಬೂಗು' ಸರಿಯಾಗಲೇ ಇಲ್ಲ.

ಮೂರನೇ ದಿನ ಬೆಳಿಗ್ಗೆ ಎದ್ದಾಗ ಆಶ್ಚರ್ಯವೆಂಬಂತೆ ನನ್ನ 'ಬೂಗಿಗೆ' ಜೀವ ಬಂದಿತ್ತು. ಈಗ ಅದು ಮತ್ತೆ 'ಮೂಗು' ಆಗಿತ್ತು! ಆದರೆ ಈ 'ಬೂಗು' 'ಮೂಗು' ಆಗಲು ಸಹಾಯ ಮಾಡಿದ್ದು ಟ್ಯಾಬ್ಲೆಟ್ಟೋ, ಬಿಸಿನೀರಿನ ಪಾತ್ರೆಯೊಂದಿಗೆ ಹಾಕಿಕೊಂಡ 'ಗುಮ್ಮ'ನೋ, ಈರುಳ್ಳಿ-ಬೆಲ್ಲವೋ, ಕಾಫ್-ಸಿರಪ್ಪೋ, ಕಷಾಯವೋ, ಜೇನುತುಪ್ಪದೊಂದಿಗೆ ನೆಕ್ಕಿದ ಪುಡಿಯೋ ಅಥವಾ ಇದ್ಯಾವುದೂ ಅಲ್ಲದ ಇನ್ನೆಂಥದೋ ಅಂತ ನನಗೂ, 'ನನ್ನ ಮೂಗಿಗೂ', 'ದದ್ದ ಬೂಗಿಗೂ' ಗೊತ್ತಾಗಲೇ ಇಲ್ಲ !

Photo Courtesy : Google !

Friday 10 May 2013

ಮೊದಲ ಸೂರ್ಯೋದಯ

ಏಪ್ರಿಲ್  ತಿಂಗಳ ಪಂಜು ಸಂಚಿಕೆಯಲ್ಲಿ ಪ್ರಕಟವಾದ ನನ್ನ ಕಾಲ್ಪನಿಕ ಕಥೆ
http://www.panjumagazine.com/?p=2100


~ ಮೊದಲ ಸೂರ್ಯೋದಯ ~

(ವಿ.ಸೂ.ಈ ಕಥೆಯಲ್ಲಿ ಬರುವ ಎಲ್ಲಾ ಜಾಗ ಹಾಗೂ ಪಾತ್ರಗಳು ಕೇವಲ ಕಾಲ್ಪನಿಕ!)

ವಾರದ ಕೊನೆ ಬಂತು ಅಂದ್ರೆ ಫ್ರೆಂಡ್ಸ್ ಎಲ್ಲಾ ಒಟ್ಟಾಗಿ ಸೇರಿ ಟ್ರಿಪ್ ಹೋಗೋದು ಕಾಮನ್ ಆಗಿದೆ. ಅದೇ ರೀತಿ ನಮ್ಮ ಗುಂಪೊಂದು ರಾತ್ರಿ ಟ್ರೆಕ್ಕಿಂಗಿಗೆ ಹೊರಟು ನಿಂತ್ವಿ. ಈ ಸಲ ಹೋಗೋಣಾ ಅನ್ಕೊಂಡಿದ್ದು ಚಂದಗಿರಿ ಅನ್ನುವ ಜಾಗಕ್ಕೆ. ಹಾಸನಕ್ಕೆ ಹೋಗುವ ದಾರಿಯಲ್ಲಿರುವ ಈ ಜಾಗವನ್ನು ನಮ್ಮ ಗುಂಪಲ್ಲಿ ಒಬ್ಬನನ್ನು ಬಿಟ್ಟರೆ ಬೇರೆ ಯಾರೂ ನೋಡಿರ್ಲಿಲ್ಲ. ಚಂದಗಿರಿಯ ತುದಿಯಲ್ಲಿ ಸೂರ್ಯೋದಯ ತುಂಬಾ ಚೆನ್ನಾಗಿ ಕಾಣುತ್ತೆ ಅನ್ನೋದನ್ನ ಕೇಳಿದ್ದ ನಾವು ಈ ಸಲ ಆ ಸೂರ್ಯೋದಯಕ್ಕೆ ಸಾಕ್ಷಿಯಾಗಲಿದ್ದೆವು. ಸೂರ್ಯ ಕೆಂಪಗೆ ಸೇಬು ಹಣ್ಣಿನ ಹಾಗೆ ಕಾಣುತ್ತಾನೆ ಅಂತೆಲ್ಲಾ ಹೇಳೋದು ಕೇಳಿದ್ದೆ. ಇದು ಬಹಳ ಸೋಮಾರಿಯಾದ ನಾನು ನೋಡುವ ಮೊದಲ ಸೂರ್ಯೋದಯವಾದ್ದರಿಂದ ನನ್ನ ಎಕ್ಸೈಟ್ಮೆಂಟ್ ಜಾಸ್ತೀನೇ ಇತ್ತು!

ನಾವು ಒಟ್ಟು ಹನ್ನೊಂದು ಜನ ಇದ್ದಿದ್ರಿಂದ ಒಂದು ಟಿ.ಟಿ. (ಟೆಂಪೋ ಟ್ರಾವೆಲ್ಲರ್) ಬಾಡಿಗೆಗೆ ತಗೊಂಡು ಅದರ ಡ್ರೈವರ್ ಜೊತೆ ರಾತ್ರಿ ಹನ್ನೊಂದು ಘಂಟೆಗೆ ಬೆಂಗಳೂರು ಬಿಟ್ವಿ. ಬೆಳಗ್ಗಿನಿಂದ ಆಫೀಸಿನಲ್ಲಿ ಕೆಲಸ ಮಾಡಿ ಸುಸ್ತಾಗಿದ್ದಕ್ಕೋ ಏನೋ ನಾಲ್ಕೈದು ಜನರನ್ನು ಬಿಟ್ಟು ಉಳಿದೆಲ್ಲರೂ ನಿದ್ದೆಗೆ ಜಾರಿದ್ವಿ.

ನನಗಂತೂ ಮತ್ತೆ ಎಚ್ಚರವಾಗಿದ್ದು ಚಂದಗಿರಿ ಬಂತು ಅಂತ ಪಕ್ಕದಲ್ಲಿದ್ದ ನರೇಂದ್ರ ನನ್ನ ಎಬ್ಬಿಸಿದಾಗಲೇ. ಬೆಟ್ಟದ ಬುಡದವರೆಗೆ ಹೋಗಲು ದಾರಿ ಇಲ್ಲವಾದ್ದರಿಂದ ಟಿ.ಟಿ.ಯನ್ನು ಬೆಟ್ಟದಿಂದ ಎರಡು ಕಿ.ಮೀ. ದೂರದಲ್ಲೇ ನಿಲ್ಸಿದ್ರು. ಅಲ್ಲಿಂದ ಬೆಟ್ಟದ ತನಕ ನಡ್ಕೊಂಡೇ ಹೊರಟ್ವಿ. ರಾತ್ರಿ ಆಗಿದ್ರಿಂದ ಟಾರ್ಚ್ ಇಲ್ಲದೇ ದಾರಿ ಕಾಣುತ್ತಿರಲಿಲ್ಲ. ನಮ್ಮ ಹನ್ನೊಂದು ಜನಕ್ಕೆ ಇದ್ದ ಟಾರ್ಚ್ ಐದೇ! ಟಾರ್ಚ್ ತರದೇ ಇರುವವರಿಗೆ "ನಿಮಗೆ ನಾವು ಟಾರ್ಚ್ ಹಿಡಿಯೋದಿಲ್ಲ" ಅಂತ ಆಟ ಆಡಿಸ್ತಾ ಬೆಟ್ಟದ ಕಡೆಗೆ ನಮ್ಮ ತಂಡ ಸಾಗಿತ್ತು.

ಇದ್ದಕ್ಕಿದ್ದಂತೆ ಕಣ್ಣು ಕೋರೈಸುವ ಬೆಳಕು. ಜೊತೆಗೇ ಜೋರಾಗಿ ಗುಡುಗಿದಂತೆ ಶಬ್ದ.ಅಲ್ಲಿಯವರೆಗೂ ಗಮನಿಸಿಯೇ ಇರದ ಆಕಾಶವನ್ನು ಈಗ ಎಲ್ಲರೂ ಒಟ್ಟಿಗೇ ನೋಡಿದ್ವಿ. ಒಂದು ನಕ್ಷತ್ರವೂ ಕಾಣದಂತೆ ಆಕಾಶವನ್ನು ಮುಚ್ಚಿರುವ ಮೋಡ. ಇದೆಂಥಾ ಟೈಮಲ್ಲಿ ಟ್ರೆಕ್ಕಿಂಗಿಗೆ ಬಂದ್ವಪ್ಪ ಅನ್ಕೊಂಡೆ. ವಾಪಸ್ ಹೋಗಿಬಿಡೋಣ ಅಂತ ನನ್ನನ್ನೂ ಸೇರಿ ನಾಲ್ಕೈದು ಜನ ಹೇಳಿದ್ವಿ. ಆದ್ರೆ ಈ ಟ್ರೆಕ್ಕಿಂಗ್ ಅರೇಂಜ್ ಮಾಡಿದ್ದ ನವೀನ್ ಗೆ ಯಾಕೋ ಮನ್ಸಿರ್ಲಿಲ್ಲ.
"ಇಲ್ಲೀವರೆಗೂ ಬಂದು ವಾಪಸ್ ಹೋಗ್ಬೇಕಾ? ಬನ್ರೋ ಬೆಟ್ಟ ಹತ್ತೋಣ. ಏನೂ ಆಗಲ್ಲ" ಅಂದ. ಮಳೆ ಬಂದರೆ ಬೆಟ್ಟದಲ್ಲಿ ನಡೆಯಲು ಜಾರಬಹುದೇನೋ ಅನ್ನೋ ಯೋಚನೆ ಬಂತು. ಆದ್ರೆ ವಾಪಸ್ ಹೋಗೋಣ ಅನ್ನೋವ್ರ ಸಂಖ್ಯೆ ಕಡಿಮೆಯಾಗಿ ಬೆಟ್ಟದ ಕಡೆಗೆ ಮುಂದುವರಿದೆವು.

ಹಾಗೇ ಹತ್ತು ನಿಮಿಷ ನಡೆದಿರಬಹುದಷ್ಟೇ. ಬೆಟ್ಟದವರೆಗಿನ ದಾರಿ ಮುಗಿದಿತ್ತು. ಇನ್ನೇನಿದ್ದರೂ ಪೊದೆ/ಬಂಡೆಗಳ ಮಧ್ಯೆ ಸಾಗಿ ಬೆಟ್ಟದ ತುದಿ ತಲುಪುವ, ಒಮ್ಮೆ ಒಬ್ಬರು ಮಾತ್ರ ಹೋಗಬಹುದಾದ ಕಾಲುದಾರಿ.  ನಾವ್ಯಾರೂ ಆ ಕಾಲುದಾರಿಯಲ್ಲಿ ಮೂವತ್ತು ಹೆಜ್ಜೆಯೂ ಇಟ್ಟಿರಲಿಲ್ಲ ಸಣ್ಣ ಮಳೆ ಹನಿಗಳು ತಲೆಯ ಮೇಲೆ ಬೀಳಲಾರಂಭಿಸಿತು.
"ಈ ಮಳೇಲಿ ಬೆಟ್ಟ ಹತ್ತೋದ್ರಲ್ಲೂ ಒಂಥರಾ ಮಜಾ ಬರುತ್ತೆ ಕಣ್ರೋ" ಅಂದ ನನ್ನ ಮುಂದೆ ಇದ್ದ ಯಾರೋ ಒಬ್ಬ!

ಹಾಗೇ ಅದೇ ಮಳೇಲಿ ಆ ಬೆಟ್ಟಾನ ಒಂದು ಕಿ.ಮೀ. ಅಷ್ಟು ಹತ್ತಿದ್ದೆವೇನೋ, ನಮ್ಮ ಎದುರಿನಲ್ಲಿದ್ದವನು ಯಾರೋ  "ಅಯ್ಯೋ..! ಬಿದ್ದೇ..." ಅಂತ ಕೂಗಿದಂತಾಯಿತು. ಯಾರಿಗೋ ಏನೋ ಆಯ್ತು ಅಂತ ನಾನು ಅಲ್ಲೇ ನಿಂತೆ. ನಾನು ಹಾಗೆ ನಿಂತಿದ್ದೇ ತಪ್ಪಾಯಿತೇನೋ! ನಾನು ಹಾಗೆ ನಿಲ್ಲುವುದಕ್ಕೂ ನನ್ನ ಮುಂದಿದ್ದವ್ನು ಆಯತಪ್ಪಿ ನನ್ನ ಮೇಲೆ ಬೀಳುವುದಕ್ಕೂ ಸರಿಯಾಯಿತು. ಸುತ್ತಲೂ ಹಿಡ್ಕೊಳ್ಳೋಕೆ ಏನೂ ಇಲ್ದೇ ನನಗೂ ನಿಲ್ಲೋಕೆ ಆಗ್ಲಿಲ್ಲ. ನಾನು ಬಿದ್ದವನೇ ಕಾಲುದಾರಿಯ ಎಡಬದಿಗಿದ್ದ ಇಳಿಜಾರಿನಲ್ಲಿ ಡ್ರಮ್ಮಿನ ಹಾಗೆ ಉರುಳಿ ಹೋದೆ. ಹಾಗೇ ಅದೆಷ್ಟು ದೂರ ಉರುಳಿದೆನೋ? ತಲೆಗೆ ಕಲ್ಲೋ, ಮರವೋ ಜೋರಾಗಿ ತಾಗಿತು. "ಅಮ್ಮಾ..." ಅಂತ ಜೋರಾಗಿ ಕೂಗಿದೆ. ಕಣ್ಣು ಬಿಟ್ಟು ನೋಡಿದ್ರೆ ಟಿ.ಟಿ. ಇನ್ನೂ ಹೋಗ್ತಾನೇ ಇದೆ! ನಾನಿನ್ನೂ ಟಿ.ಟಿ.ಯಲ್ಲೇ ಕೂತಿದ್ದೆ.

ಇಷ್ಟು ಹೊತ್ತೂ ನಾ ಕಂಡಿದ್ದು ಕನಸು ಅಂತ ಗೊತ್ತಾಯ್ತು. ನನ್ನ ಕನಸನ್ನು ಕೇಳಿದ್ರೆ ಎಲ್ರೂ ನಗ್ತಾರೆ ಅನ್ಕೋತಾ ಪಕ್ಕದಲ್ಲಿದ್ದ ನರೇಂದ್ರನನ್ನ ನೋಡಿದೆ. ಅವನ ಮುಖಭಾವ ಯಾಕೋ ವಿಚಿತ್ರವಾಗಿತ್ತು!
"ತಲೆ ತುಂಬಾ ನೋವಾಗ್ತಾ ಇದ್ಯನೋ? ನೀರೇನಾದ್ರೂ ಕುಡಿತೀಯಾ?" ಅಂತ ಅವನ ಕೈಯಲ್ಲಿದ್ದ ನೀರಿನ ಬಾಟ್ಲಿ ಕೊಟ್ಟ.
"ಬೇಡ" ಅಂತಷ್ಟೇ ಹೇಳಿ ನನ್ನ ಹಣೆ ಮುಟ್ಟಿ ಕೈ ನೋಡಿಕೊಂಡೆ.
ಇದು ಕನಸಲ್ಲ ಅನ್ನೋದು ಈಗ ಗೊತ್ತಾಯ್ತು!
ಅಂತೂ ನಾನು ಚಂದಗಿರಿ ಬೆಟ್ಟಕ್ಕೆ ಹೋಗಿ ಸೂರ್ಯೋದಯದ ಕೆಂಪು ಬಣ್ಣವನ್ನ ನೋಡಿದ್ದೆ.
ನನ್ನ ಕೈಗಂಟಿರುವ ರಕ್ತದ ರೂಪದಲ್ಲಿ!


Photo Courtesy
-Google  !

Friday 29 March 2013

ತೀರ್ಥಹಳ್ಳಿಯಲ್ಲೊಂದು ಹೋಳಿ

ದಾರೀಲಿ ಸಿಕ್ಕಿದವರೆಲ್ಲಾ ನಮಗೆ ಬಣ್ಣ ಹಾಕ್ತಾರೆ ಅನ್ಕೊಂಡು ಸ್ವಲ್ಪ ಡಾರ್ಕ್ ಕಲರ್ ಬಟ್ಟೆ ಹಾಕ್ಕೊಂಡು ಕಾಲೇಜಿಗೆ ಹೊರ್ಟಿದ್ವಿ. ಆಗ ನಾವಿನ್ನೂ ಡಿಪ್ಲೋಮಾ ಎರಡನೇ ಸೆಮಿಸ್ಟರ್ ನಲ್ಲಿ ಓದ್ತಾ ಇದ್ದಿದ್ರಿಂದ ಕಾಲೇಜಿಗೆ ಹೋಗೋದು ತಪ್ಪಿಸ್ತಿದ್ದಿದ್ದು ಕಡಿಮೆ. ಕಾಲೇಜಿನಲ್ಲಿ ಬೇರೆ ಎಲ್ಲಾ ಕ್ಲಾಸ್ ಗಳಲ್ಲಿ ಮುಖಕ್ಕೆಲ್ಲ ಬಣ್ಣ ಬಳ್ಕೊಂಡು ಓಡಾಡ್ತಿದ್ರೂ ನಮ್ಮ ಕ್ಲಾಸಲ್ಲಿರೋ ಯಾರಿಗೂ ಅದ್ಯಾಕೋ ಹೋಳಿ ಆಡೋ ಮನಸೇ ಆಗಿರ್ಲಿಲ್ಲ ( ಅಥವಾ ಆ ರೀತಿ ನಟಿಸುತ್ತಿದ್ದರು !).

ಮಧ್ಯಾನ್ಹ ಕ್ಲಾಸ್ ಮುಗೀತು, ಸಧ್ಯ ಬಟ್ಟೆ ತೊಳೆಯೋದು ಉಳೀತು, ಯಾರೂ ಬಣ್ಣ ಹಾಕಿಲ್ವಲ್ಲ ಅನ್ಕೋತಾ ಕಾಲೇಜ್ ಕಾಂಪೌಂಡಿಂದ ಹೊರಗೆ ಬರ್ತಾ ಇರ್ಬೇಕಾದ್ರೆ "ಠಪ್" ಅಂತ ತಲೆಗೆ ಒಂದು ಏಟು ಬಿತ್ತು ! ಯಾರು ಹೊಡೆದಿದ್ದು ಅಂತ ನೋಡೋ ಮೊದ್ಲು, ಯಾವುದರಲ್ಲಿ ಹೊಡೆದಿದ್ದಾರೆ ಅಂತ ನೋಡೋದು ಮನುಷ್ಯನ ಲಕ್ಷಣ ಇರಬೇಕು. ಯಾವುದರಲ್ಲಿ ಹೊಡೆದಿದ್ದಾರೆ ಅಂತ ಕೈಯಲ್ಲಿ ಮುಟ್ಟಿ ನೋಡೋ ಅವಶ್ಯಕತೆಯೇ ಬರಲಿಲ್ಲ. ತಲೆಯ ಮೇಲೆ ಬಿದ್ದಿದ್ದ ಮೊಟ್ಟೆಯ ತಿರುಳು ಇಳಿದು ಮುಖದ ಮೇಲೆ ಬರ್ತಿತ್ತು. ತಲೆ ಮೇಲೆ ಏನೋ ಬಿದ್ದಿದ್ದು, ಅದೇನು ಅಂತ ನಾನು ನೋಡಿದ್ದು, ಯಾರು ಹೊಡೆದಿದ್ದು ಅಂತ ತಿರುಗಿದ್ದು ಇವೆಲ್ಲ ಎರಡ್ಮೂರು ಸೆಕೆಂಡಿನಲ್ಲೇ ನಡೆದಿದ್ರೂ ನಾನು ತಿರುಗುವಾಗ ತಡವಾಗಿತ್ತು! ಈ ಸಲ ಸೀದಾ ನನ್ನ ಹಣೆಗೇ ಒಂದು ಮೊಟ್ಟೆ ಬಿದ್ದಿತ್ತು.

ತಡವಾಗಿಯಾದ್ರೂ ನಮಗೆ ಎಚ್ಚರವಾಯಿತು, ನಮ್ಮ ಕ್ಲಾಸಿನವರೂ ಹೋಳಿ ಆಡ್ತಿದಾರೆ ಅಂತ! ಆಮೇಲೆ ಬಣ್ಣ, ಟೊಮ್ಯಾಟೋ, ಮೊಟ್ಟೆ, ಕೊನೆಗೆ ಕಲ್ಲು, ಮಣ್ಣನ್ನೂ ಒಬ್ಬರಿಗಿಬ್ಬರು ಮೈ ಮೇಲೆ ಎರಚಿಕೊಳ್ಳುತ್ತಾ ಹಾಸ್ಟೆಲ್ ಕಡೆ ಹೊರೆಟೆವು. ಕಾಲೇಜಿಂದ ನಮ್ಮ ಹಾಸ್ಟೆಲ್ ಮೂರು ಕಿ.ಮೀ. ದೂರ ಇದ್ದಿದ್ದರಿಂದ ಅಷ್ಟು ದೂರವೂ ನಮ್ಮ ಹೋಳಿ ಆಟ ಮುಂದುವರಿಯಿತು.

ಹಾಸ್ಟೆಲ್ ಹತ್ತಿರ ಹೋಗೋವಾಗ ಎಲ್ಲರ ಮೈ ವಿವಿಧ ಬಣ್ಣಗಳಿಂದ ತುಂಬಿ ಹೋದ್ದರಿಂದ ಸ್ನಾನಕ್ಕೆ ಹೊಳೆಗೆ ಹೋಗೋಣಾ ಎಂದಾಯಿತು. ತೀರ್ಥಹಳ್ಳಿ ಎಂಬ ಪೇಟೆಗೆ ಹೋದ ಪ್ರತಿಯೊಬ್ಬರೂ ಒಂದಲ್ಲಾ ಒಂದು ಬಾರಿ ಹೋಗಲೇ ಬೇಕಾದ ರಾಮ ಮಂಟಪದ ಹತ್ತಿರ ಸ್ನಾನಕ್ಕೆ ಹೋದ್ವಿ. ಆ ತುಂಗಾ ನದೀನೋ, ಮಳೆಗಾಲದಲ್ಲಿ ಇದೇ ರಾಮಮಂಟಪವನ್ನು ತನ್ನ ನೀರಿನಿಂದ ಮುಚ್ಚಲು ಹವಣಿಸಿ ಹೆಚ್ಚಿನಸಲ ಯಶಸ್ವಿಯೂ ಆಗುವಂಥದ್ದು (ರಾಮಮಂಟಪ ಮುಳುಗಿದರೆ ನಮ್ಮ ಕಾಲೇಜಿಗೆ ರಜೆ ಕೊಡುತ್ತಿದ್ದರಿಂದ ನಾವೂ ಅದಕ್ಕೇ ಕಾಯ್ತಾ ಇದ್ವಿ!). ಅಂತಹ ತುಂಗೆ ಬೇಸಿಗೆಯಲ್ಲಿ ಮಾತ್ರ ರಾಮಮಂಟಪದ ಕಾಲಿನ ಬಳಿಯೇ ಹರಿಯುತ್ತಿರುತ್ತಾಳೆ. ಆ ಜಾಗಕ್ಕೇ ನಮ್ಮ ಗುಂಪು ಸ್ನಾನಕ್ಕೆ ಹೋಗಿದ್ದು.

ಆ ಗುಂಪಿನಲ್ಲಿದ್ದ ಎಲ್ಲರಿಗೂ ಅಲ್ಪ ಸ್ವಲ್ಪವಾದರೂ ಈಜಲು ಬರುತ್ತಿತ್ತು. ನನ್ನ ಸ್ನೇಹಿತ 'ಪೂರ್ಣ'( +Tejaswi Poornachandra ) ಹಾಗೂ ನನ್ನನ್ನು ಬಿಟ್ಟು! ಸುತ್ತಲೂ ಈಜಲು ಬರುವವರೇ ಇದ್ದಿದ್ರಿಂದ ನಾವೂ ನೀರಿಗೆ ಇಳಿದ್ವಿ. ಅಷ್ಟೇನೂ ಆಳವಿಲ್ಲದ ಜಾಗದಲ್ಲೂ ನಾವು ಮುಳುಗುವಷ್ಟಿದ್ದ ಜಾಗಕ್ಕೆ ಹೋಗಿ, ಒಂದೆರಡು ಬಾರಿ ಮುಳುಗುವಂತಾಗಿ, ಉಳಿದವರೆಲ್ಲಾ ನಮ್ಮನ್ನು ಆ ಆಳದಿಂದ ಹೊರಗೆ ತಳ್ಳಿ. ಈ ರೀತಿ ನಮ್ಮಿಬ್ಬರಿಗೂ ಮೂರ್ನಾಲ್ಕು ಬಾರಿಯಾದರೂ ಆಯಿತು! ಆ ರೀತಿ ಮುಳುಗಿದಾಗ ಸತ್ತೇ ಹೋಗ್ತೀವೇನೋ ಅನ್ನಿಸಿತ್ತು. ಆದರೆ ನಿಜವಾಗ್ಲೂ ಆ ಘಟನೆ ಆಗ್ತಿತ್ತೇನೋ ಅನ್ನಿಸಿದ್ದು ಸ್ವಲ್ಪ ಸಮಯದ ನಂತರ!

ನಾವೆಲ್ಲರೂ ಇನ್ನೂ ಈಜ್ತಾ ಇರ್ಬೇಕಾದ್ರೆ ನಮ್ಮ ಕಾಲೇಜಿನವನೇ ಒಬ್ಬ ಬಂದು "ಏಳ್ರೋಲೇ! ಬರ್ರೋ ನೀರಿಂದ ಮೇಲೆ. ಅಲ್ಲಿ ನಮ್ ಕಾಲೇಜವ್ನು ಒಬ್ಬ ಹೋಗಿದ್ದು ಸಾಲದೇನೋ! ಬನ್ರೋ" ಅಂತ ಬಯ್ಯೋಕೆ ಶುರುಮಾಡಿದ. ತಣ್ಣನೆಯ ನೀರಿನೊಳಗಿದ್ರೂ ಮೈಯೆಲ್ಲಾ ಯಾಕೋ ಬಿಸಿಯಾದಂತಾಯ್ತು. ಎಲ್ರೂ ನೀರಿಂದ ಹೊರಗೆ ಬಂದು 'ಏನಾಯ್ತು?' ಅಂತ ವಿಚಾರಿಸಿದ್ವಿ. ನಮ್ಮ ಕಾಲೇಜಿನವನೇ ಬೇರೆ ಬ್ರಾಂಚ್ ಅಲ್ಲಿ ಓದುತ್ತಿದ್ದ ಒಬ್ಬ ಹುಡುಗ ಮತ್ತವನ ಸ್ನೇಹಿತರು, ನಮ್ಮಂತೆಯೇ ಹೋಳಿ ಆಡಿ ಸ್ನಾನಕ್ಕೆ ಹೊಳೆಗೆ ಹೋಗಿದ್ದರು. ಅವರು ಸ್ನಾನಕ್ಕೆ ಹೋದ ಜಾಗಕ್ಕೂ ನಾವಿದ್ದ ಜಾಗಕ್ಕೂ ತುಂಗಾ ನದಿಯಲ್ಲಿ ನಾಲ್ಕೈದು ಕಿ.ಮೀ. ಅಂತರವಿತ್ತಷ್ಟೆ. ತುಂಗೆ ಅವನ ಮೈ ಮೇಲಿದ್ದ ಹೋಳಿಯ ಬಣ್ಣ ತೊಳೆಯುವ ಬದಲು ಅವನನ್ನೇ ತೊಳೆದುಕೊಂಡು ಹೋಗಿದ್ದಳು.

ಎಷ್ಟು ನಿಜಾನೋ ಗೊತ್ತಿಲ್ಲ ಪ್ರತೀ ಹೋಳಿಯಲ್ಲಿ ತುಂಗೆಯಲ್ಲಿ ಒಬ್ಬರಾದರೂ ಲೀನರಾಗುತ್ತಾರೆಂದು ಒಂದಷ್ಟು ಹಿರಿಯರು ಹೇಳಿದ್ದನ್ನು ಕೇಳಿದ್ದೇನೆ. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರಯತ್ನಿಸಿಲ್ಲ.
ಅದಾದ ಮುಂದಿನ ಎರಡು ವರ್ಷ ಕಾಲೇಜಿನಲ್ಲಿ ಹೋಳಿಯನ್ನು ನಿಷೇಧಿಸಲಾಗಿತ್ತು. ಈಗ ಹೇಗಿದೆಯೋ ಗೊತ್ತಿಲ್ಲ.
ಅದಾದ ನಂತರ ಅದೇ ರಾಮಮಂಟಪದ ಹತ್ತಿರ ಬಹಳ ಸಲ ಈಜಲು ಹೋಗಿದೀವಿ. ಆದರೆ ಹೋಳಿ ಹಬ್ಬದ ದಿನ ಮುಳುಗಿದಂತೆ ನಾವು ಇನ್ಯಾವತ್ತೂ ಆ ಜಾಗದಲ್ಲಿ ಮುಳುಗಿಲ್ಲ.
ಏನು ಮಾಡೋದು ಹೇಳಿ? ಕೆಟ್ಟವರು ಜಾಸ್ತಿ ದಿನ ಬದುಕ್ತಾರಂತೆ.


Photo Courtesy : Google !